ಅಗ್ನಿ ಅವಘಡದಿಂದ 3 ಮನೆಗಳು ಭಸ್ಮ


ಮೈಸೂರು: ತಾಲೂಕಿನ ಬೋರೆ ಆನಂದೂರು ಗ್ರಾಮದಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿ ಮೂರು ಮನೆಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದವು. ಶಾಸಕ ಜಿ.ಟಿ.ದೇವೇಗೌಡ ಅವರು ಈ ಮನೆಗಳ ಮಾಲೀಕರಾದ ಶನಿವಾರೇಗೌಡ, ವೆಂಕಟೇಶ್ ಗೌಡ, ಶ್ರೀನಿವಾಸ್ ಗೌಡ ಅವರಿಗೆ ವೈಯಕ್ತಿಕವಾಗಿ ತಲಾ 1 ಲಕ್ಷ ರೂಪಾಯಿ ಪರಿಹಾರ ವಿತರಿಸಿದರು.

ಗ್ರಾಮಕ್ಕೆ ಇಂದು ಭೇಟಿ ನೀಡಿದ ಅವರು, ಮನೆ ಕಳೆದುಕೊಂಡ ಮೂರು ಕುಟುಂಬದವರ ಜೊತೆ ಮಾತನಾಡಿ, ಧೈರ್ಯ ತುಂಬಿದರು. ಆಕಸ್ಮಿಕವಾಗಿ ನಡೆದಿರುವ ಘಟನೆಯಿಂದಾಗಿ ಮನೆಯಲ್ಲಿದ್ದ ಎಲ್ಲ ವಸ್ತುಗಳೂ ಸುಟ್ಟು ಹೋಗಿವೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

ಜಿ.ಟಿ.ದೇವೇಗೌಡ ಮಾತನಾಡಿ, “ಕಂದಾಯ, ವಿದ್ಯುತ್ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಕೊಡಲಿದ್ದಾರೆ. ಸರ್ಕಾರದ ವತಿಯಿಂದ ಬೇಗ ಪರಿಹಾರ ಕೊಡಿಸಲಾಗುವುದು. ಗ್ರಾಮದವರು ಯಾವುದೇ ರಾಜಕೀಯ ಮಾಡದೆ ಸಂಕಷ್ಟದ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಸಹಕಾರ ನೀಡಬೇಕು” ಎಂದು ಹೇಳಿದರು.

ಸ್ಥಳದಿಂದಲೇ ತಹಶೀಲ್ದಾರ್ ಹಾಗೂ ಮತ್ತಿತರರ ಜೊತೆಗೆ ಮಾತನಾಡಿ ವರದಿ ಕೊಡುವಂತೆ ಸೂಚಿಸಿದರು. ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಎನ್.ಬಿ.ಮಂಜು ಅವರು ತಲಾ ಒಂದು ಲಕ್ಷ ರೂ. ಕೊಡುವುದಾಗಿಯೂ ಭರವಸೆ ನೀಡಿದರು.


Leave a Comment

Your email address will not be published. Required fields are marked *