ಯಾವುದೇ ಕಾರಣಕ್ಕೂ ಸೋನು ನಿಗಮ್ ಅವರ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಯಾವುದಾದರೂ ಕಾರ್ಯಕ್ರಮ ನಡೆಸಿದರೆ ಅದಕ್ಕೆ ಆಯೋಜಕರೇ ಹೊಣೆಗಾರರು ಆಗಬೇಕಾಗುತ್ತದೆ. ಮುಂದಾಗುವ ಪರಿಣಾಮ ಎದುರಿಸಲು ಸಿದ್ಧರಾಗಬೇಕೆಂದು ನಿರ್ಮಾಪಕ, ನಿರ್ದೇಶಕರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತಿತರ ಮುಖಂಡರು ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿ ದೂರು ನೀಡಿ, ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಅವರ ವಿವಾದಿತ ಹೇಳಿಕೆಯಿಂದ ಕನ್ನಡದ ಮನಸ್ಸುಗಳಿಗೆ ತೀವ್ರ ನೋವಾಗಿದೆ. ಅವರು ಬಹಿರಂಗ ಕ್ಷಮೆ ಯಾಚಿಸಬೇಕು. ಅವರು ಕನ್ನಡಕ್ಕೆ ಯಾವ ರೀತಿ ಸೇವೆ ಸಲ್ಲಿಸಿದರೇನು ಪ್ರಯೋಜನ? ಈ ರೀತಿ ಮಾಡಿರುವ ಅವಮಾನವನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡಿಗರು, ಕನ್ನಡಪರ ಸಂಘಟನೆಗಳು ಕೆರಳಿ ಕೆಂಡವಾಗಿವೆ. ಅಭಿಮಾನಿಯೊಬ್ಬರ ಕನ್ನಡ ಅಭಿಮಾನವನ್ನು ಪಹಲ್ಗಾಮ್ ಘಟನೆಗೆ ಹೋಲಿಸಿದ ಸೋನು ನಿಗಮ್ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಕನ್ನಡಪರ ಸಂಘಟನೆಗಳು ಬಹಿರಂಗ ಕ್ಷಮೆಗೆ ಆಗ್ರಹಿಸಿರುವುದಲ್ಲದೆ ಕನ್ನಡ ಚಿತ್ರರಂಗದಿಂದಲೇ ಸೋನು ನಿಗಮ್ ಅವರನ್ನು ನಿಷೇಧಿಸಬೇಕೆಂದು ಒತ್ತಾಯಿಸಿವೆ.





