
ಚನ್ನಮ್ಮನ ಕಿತ್ತೂರು : ಪಟ್ಟಣ ಪಂಚಾಯತ ಚನ್ನಮ್ಮನ ಕಿತ್ತೂರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರಾಣಿ ಚನ್ನಮ್ಮಾಜಿ ಕೋಟೆ ಆವರಣದ ಎದುರುಗಡೆಯ ಮೈದಾನದಲ್ಲಿ “ಶೈಕ್ಷಣಿಕ ಪ್ರಗತಿಯತ್ತ ಚನ್ನಮ್ಮನ ಕಿತ್ತೂರು” ಮತಕ್ಷೇತ್ರ ಕಾರ್ಯಕ್ರಮದಡಿ ಭವ್ಯ ಸನ್ಮಾನ ಸಮಾರಂಭ ನಡೆಯಿತು. ಬೆಳಗಾವಿ ಜಿಲ್ಲೆಯಲ್ಲಿ ಚನ್ನಮ್ಮನ ಕಿತ್ತೂರು ತಾಲೂಕು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಬಾರಿಗೆ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮತ್ತು ಶ್ರಮ ವಹಿಸಿ ಪಾಠ ಮಾಡಿದ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರನ್ನು ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಚನಬಸಪ್ಪ ತುಬಾಕದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 12 ವರ್ಷಗಳ ಹಿಂದೆ ಚನ್ನಮ್ಮನ ಕಿತ್ತೂರು ತಾಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಗಮಿಸಿತು ಅಲ್ಲಿಂದ ಹಿಡಿದು ಇಲ್ಲಿಯವರೆಗೆ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಬಾರಿ ಪ್ರಥಮ ಬಾರಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯ. ಶಾಸಕ ಬಾಬಾಸಾಹೇಬ್ ಪಾಟೀಲ್ ಅವರ ನಿರಂತರ ಪ್ರಯತ್ನ, ಶಿಕ್ಷಕರ ಶ್ರಮ ಮತ್ತು ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು ಎಂದ ಅವರು ಒಟ್ಟು 1095 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಅದರಲ್ಲಿ 700 ವಿದ್ಯಾರ್ಥಿಗಳು ಡಿಸ್ಟಿಂಕ್ಷನನಲ್ಲಿ ಪಾಸ್ ಆಗಿದ್ದಾರೆ. ಕೇವಲ 75 ವಿದ್ಯಾರ್ಥಿಗಳು ಆರ್ಡಿನರಿ ಪಾಸ್ ಆಗಿದ್ದಾರೆ. 18 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕಗಳನ್ನು ಮತ್ತು 184 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು ಮಾತನಾಡಿ, ಶಿಕ್ಷಕರ ಶ್ರಮವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಏಕೆಂದರೆ ಅವರ ಬೋಧನೆ, ಮಾರ್ಗದರ್ಶನ ಮತ್ತು ಸಮರ್ಪಣೆಯು ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ಬೆಳೆಸುತ್ತದೆ. ಇದೇ ರೀತಿ, ಶಿಕ್ಷಣದ ಯಶಸ್ಸಿನಲ್ಲಿ ವಿದ್ಯಾರ್ಥಿಗಳ ಪರಿಶ್ರಮವು ಅಷ್ಟೇ ಮುಖ್ಯವಾಗಿದೆ, ಏಕೆಂದರೆ ಅವರ ಕಠಿಣ ಪರಿಶ್ರಮ, ಶಿಸ್ತು ಮತ್ತು ಗುರಿಯ ಕಡೆಗಿನ ಸಮರ್ಪಣೆಯು ಶೈಕ್ಷಣಿಕ ಸಾಧನೆಗೆ ದಾರಿ ಮಾಡಿಕೊಡುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜಂಟಿ ಪ್ರಯತ್ನದ ಮಹತ್ವವನ್ನು ಸೂಚಿಸುತ್ತದೆ. ಶಿಕ್ಷಕರ ಗುಣಾತ್ಮಕ ಬೋಧನೆ ಮತ್ತು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯ ಸಂಯೋಗವು ಶಿಕ್ಷಣದ ಗುರಿಗಳನ್ನು ಸಾಧಿಸಲು ಅತ್ಯಗತ್ಯ ಎಂದ ಅವರು 2026ರ ಸಾಲಿನಲ್ಲಿ ಕಿತ್ತೂರು ಕ್ಷೇತ್ರದ ಫಲಿತಾಂಶವನ್ನು ಶತಕದತ್ತ ಕೊಂಡೈಯುವ ನಿಟ್ಟಿನಲ್ಲಿ ʻʻನಮ್ಮ ಚಿತ್ತ ಶತಕದತ್ತʻʻ ಕಾರ್ಯಕ್ರಮದಡಿ ಅದಕ್ಕೆ ಬೇಕಾಗುವ ವಿಶೇಷ ಕೈಪಿಡಿ, ವಿಡಿಯೋ ಕ್ಲಿಫ್ ಸೇರಿದಂತೆ ಇತರೆ ಕಲಿಕಾ ಸಾಮಗ್ರಿಗಳನ್ನು ಬರುವ ಜೂನನಲ್ಲಿ ಎಲ್ಲ ಶಾಲೆಗಳಿಗೆ ತಲುಪಿಸುವ ಭರವಸೆಯನ್ನೂ ನೀಡಿದರು. ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಶ್ವೇತಾ ಪಾಟೀಲ್ ಮಾತನಾಡಿ, “ನಾನು ಪ್ರಥಮ ಸ್ಥಾನ ಪಡೆದುಕೊಳ್ಳುದರ ಹಿಂದೆ ಅನೇಕರ ಪರಿಶ್ರಮವಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಸಕರು ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿದ್ಯಾರ್ಥಿಗಳಿಗೆ ವಿಶೇಷ ಅಧ್ಯಯನ ಕೈಪಿಡಿ ಹಾಗೂ ವಿಡಿಯೋ ಕ್ಲಿಪ್ಸ್ಗಳನ್ನು ತಯಾರಿಸಿ ಅವರಿಂದ ಮಾರ್ಗದರ್ಶನ ಕೊಡಿಸುವುದಾಗಿರಬಹುದು, ನಮ್ಮ ಶಾಲೆಯ ಶಿಕ್ಷಕರು ಪ್ರಾರ್ಥನೆ ಸಮಯದಲ್ಲಿ ವಿದ್ಯಾರ್ಥಿಗಳಿಂದ ಪದ್ಯಗಳನ್ನ ಕಂಠಪಾಟ ಮಾಡಿಸುತ್ತಿದ್ದರು. ಸಮಯದ ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಶಾಲೆಗೆ ಹೋಗುವಾಗ-ಬರುವಾಗ ಗದ್ಯ ಮತ್ತು ಪದ್ಯಗಳನ್ನು ಕಂಠಪಾಠ ಮಾಡುವಂತೆ ಶಿಕ್ಷಕರು ಸಲಹೆ ನೀಡಿದ್ದರು. ತಂದೆ-ತಾಯಿ ಮತ್ತು ಮಾಮಂದಿರ ಸಹಕಾರವೂ ನನಗೆ ಬಹಳ ಉಪಯುಕ್ತವಾಯಿತು,” ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಮಾತನಾಡಿ, “ಇದು ಮಾತನಾಡುವ ಸಭೆಯಲ್ಲ, ಪ್ರಶಂಸೆಯ ಸಭೆಯಾಗಿದೆ. ಕಿತ್ತೂರು ರಾಣಿ ಚನ್ನಮ್ಮ ರಾಷ್ಟ್ರದಾದ್ಯಂತ ಹೆಸರು ಮಾಡಿದಂತೆ ಕಿತ್ತೂರು ನಾಡಿನ ಹೆಣ್ಣು ಮಕ್ಕಳು ಸಹ ಹೆಸರು ಮಾಡಬೇಕು ನಮ್ಮ ಭಾಗದಿಂದ ದ್ರೌಪದಿ ಮುರ್ಮು ಅವರಂತೆ ಯಾರಾದರೂ ರಾಷ್ಟ್ರಪತಿಗಳಾಗಬೇಕು ಎಂದು ಕಿವಿ ಮಾತು ಹೇಳಿದರು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ರಾಜಯೋಗೀಂದ್ರ ಮಹಾಸ್ವಾಮಿಗಳು, “ಇಂದು ಕಿತ್ತೂರಿಗೆ ಹೆಮ್ಮೆಯ ದಿನ. ಶಾಸಕ ಬಾಬಾಸಾಹೇಬ್ ಪಾಟೀಲ್ ಅವರ ದಿಟ್ಟ ನಿರ್ಧಾರದಿಂದ ಈ ಸಾಧನೆ ಸಾಧ್ಯವಾಯಿತು. ಜ್ಞಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದ ಅವರು ಗುರುವಿಗೆ ಮಿಗಿಲಾದ ವ್ಯಕ್ತಿ ಸಮಾಜದಲ್ಲಿ ಬೇರೆ ಯಾರು ಇಲ್ಲ. ಭಾರತದ ಭವಿಷ್ಯ ವರ್ಗದ ಕೊಟಡಿಯಲ್ಲಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಅಧ್ಯಯನ ಸಾಮಗ್ರಿಗಳ ಬಿಡುಗಡೆ, ಭವಿಷ್ಯದ ಯೋಜನೆ: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡುಗುವಂತಹ ವಾತಾವರಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ 2026 ರ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧತೆಗಾಗಿ ಅಧ್ಯಯನ ಸಾಮಗ್ರಿಗಳ ತಯಾರಿಕೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ “ನಮ್ಮ ಚಿತ್ತ ಶತಕದತ್ತ” ಎಂಬ ಧ್ಯೇಯದೊಂದಿಗೆ ಕಿತ್ತೂರು ಕ್ಷೇತ್ರವು ಮುಂದಿನ ವರ್ಷವೂ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಲು ಸಿದ್ಧವಾಗಿದೆ. ಅದಕ್ಕೆ ಬೇಕಾರ ಪೂರಕ ಅಧ್ಯನ ಸಾಮಗ್ರಿಗಳ ಬಿಡುಗಡೆ ಮಾಡಲಾಯಿತು. ಈ ಸನ್ಮಾನ ಸಮಾರಂಭವು ಕಿತ್ತೂರಿನ ಶೈಕ್ಷಣಿಕ ಪ್ರಗತಿಯ ಹೆಗ್ಗುರುತಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಸಕರ ಸಮರ್ಪಣೆಯನ್ನು ಎತ್ತಿ ತೋರಿಸಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕದ ಹಾಗೂ ಅವರ ಶಿಕ್ಷಕರು ಮೊದಲ ಬಾರಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಪರೀಕ್ಷೆಯ ಪೂರ್ವದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ನುರಿತ ಶಿಕ್ಷಕರಿಂದ ವಿಷಯವಾರು ಕ್ಲಿಷ್ಟಾಂಶಗಳು ಹಾಗೂ ಅತೀ ಹೆಚ್ಚು ಅಂಕಗಳಿಸುವ ವಿಧಾನಗಳ ಕುರಿತು ತಿಳುವಳಿಕೆ ಕೊಡಿಸದ್ದು. ನೇರ ಪೂನ್ ಇನ್ ಕಾರ್ಯಕ್ರಮ ಆಯೋಜನೆ ಮಾಡಿದ್ದು. ಆಯಾ ವಿಷಯಕ್ಕೆ ಸಂಬಂಧಿಸಿದ ಶಿಕ್ಷಕ ಮತ್ತು ಶಿಕ್ಷಕಿಯರಿಂದ ಸಂದೇಹಗಳ ಪರಿಹಾರ ಪಠ್ಯಕ್ರಮಗಳ ಮಾರ್ಗದರ್ಶನ, ಪರೀಕ್ಷಾ ಪೂರ್ವ ತಯಾರಿ ಜೊತೆಗೆ ಅತೀ ಹೆಚ್ಚು ಅಂಕ ಗಳಿಸುವ ವಿಧಾನಗಳ ಕುರಿತು ಮಾರ್ಗದರ್ಶನ ಕೊಡಿಸಿದ್ದು ಅತೀ ಹೆಚ್ಚು ಅಂಕ ಗಳಿಸಲು ಕಾರಣವಾಯಿತು. ಸಂಕೇತ ಕಂಬಿ. ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ
ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ಜಮ್ಮು-ಕಾಶ್ಮೀರದ ಅನಂತನಾಗ ಜಿಲ್ಲೆಯ ಪಹಲ್ಗಾಮದಲ್ಲಿ ಉಗ್ರರ ಕೃತ್ಯದಲ್ಲಿ ಮೃತಪಟ್ಟ ಕನ್ನಡಿಗರು ಸೇರಿದಂತೆ 26 ಜನರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.
ಸಾಹಿತಿ ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಕದಮ ಸ್ವಾಗತಿಸಿದರು. ಶಿಕ್ಷಕ ಪ್ರತಾಪ ನಾಡಗೀತೆಯನ್ನು ಹಾಡಿದರು. ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಪ್ಯಾಟಿ ಅವರು ಮಾತನಾಡಿದರು
ಈ ವೇಳೆ ತಾಪಂ ಇಓ ಕಿರಣ ಗೋರ್ಪಡೆ, ಲೋಕೋಪಯೋಗಿ ಇಲಾಖೆಯ ಎಇಇ ಸಂಜೀವ ಮಿರಜಕರ, ಪಪಂ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಸಿಪಿಐ ಶಿವಾನಂದ ಗುಡಗನಟ್ಟಿ, ಬಿಆರ್ಸಿ ವಿನೋದ ಪಾಟೀಲ, ಸಂಜು ಹುಬ್ಬಳ್ಳಿ, ಬಸವರಾಜ ಬಿದರಿ, ರಾಜಶೇಖರ ರಗಟಿ, ವಿದ್ಯಾರ್ಥಿಗಳು, ಪಾಲಕರು, ವಿವಿಧ ಶಾಲೆಯ ಶಿಕ್ಷಕರು ಸೇರಿದಂತೆ ಪಟ್ಟಣದ ನಾಗರಿಕರು ಇದ್ದರು.





