ಚಿತ್ರದುರ್ಗದ ಮುರುಘಾ ಮಠದಶ್ರೀಗಳ ಪೋಕ್ಸೋ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ ಮುರುಘಾಶ್ರೀಗಳು ಜೈಲು ಸೇರಿದ್ದರು. ಇದೀಗ, ಪ್ರಕರಣದ ಸಾಕ್ಷಿಗಳ ವಿಚಾರಣೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಮುರುಘಾಶ್ರೀ ಬಿಡುಗಡೆಗೆ ಕೋರ್ಟ್ ಆದೇಶ ನೀಡಿದೆ.

ಮುರುಘಾ ಶ್ರೀ
ಚಿತ್ರದುರ್ಗ, ಅಕ್ಟೋಬರ್ 07: ಪೋಕ್ಸೋ (Pocso) ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗ ಮುರುಘಾಶ್ರೀ (Chitradurga Murugha Shri) ಅವರನ್ನು ಬಿಡುಗಡೆಗೆ ನ್ಯಾಯಾಲಯ ಆದೇಶ ಹೊರಡಿಸಿದೆ. ಸಾಕ್ಷ್ಯಗಳ ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.
ಈ ಹಿಂದೆ ಹೈಕೋರ್ಟ್ ಮುರುಘಾಶ್ರೀಗೆ ಜಾಮೀನು ನೀಡಿತ್ತು. ಆದರೆ, ಸಾಕ್ಷ ವಿಚಾರಣೆ ನಡೆಸುವವರೆಗೆ ಬಂಧನದಲ್ಲಿಡಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದೀಗ, ಸಂತ್ರಸ್ತೆಯರಿಬ್ಬರು ಸೇರಿದಂತೆ 12 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದ್ದು, ಮುರುಘಾಶ್ರೀ ಬಿಡುಗಡೆಗೆ ನ್ಯಾಯಾಲಯ ಆದೇಶಿಸಿದೆ.
ಕೋರ್ಟ್‌ನಿಂದ ಜಿಲ್ಲಾ ಕಾರಾಗೃಹಕ್ಕೆ ತೆರಳಿ ಬಳಿಕ ಮುರುಘಾಶ್ರೀ ಬಿಡುಗಡೆಯಾಗಲಿದ್ದಾರೆ. ಬಿಡುಗಡೆ ಬಳಿಕ ಶ್ರೀಗಳು ಚಿತ್ರದುರ್ಗ ಜೈಲಿನಿಂದ ದಾವಣಗೆರೆಗೆ ತೆರಳಲಿದ್ದಾರೆ.




