
ಚನ್ನಮ್ಮನ ಕಿತ್ತೂರು :ಕಳೆದ 25 ವರ್ಷಗಳಿಂದ ಬೆಳಗಾವಿ-ಕಿತ್ತೂರು-ಧಾರವಾಡ ನೇರ ರೈಲು ಮಾರ್ಗ ನಿರ್ಮಾಣಕ್ಕೆ ನಿರಂತರವಾಗಿ ಒತ್ತಾಯಿಸಲಾಗುತ್ತಿದೆ. ಪ್ರತಿ ಸರ್ಕಾರ ಬದಲಾದಾಗಲೂ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸುವ ಮೂಲಕ ಈ ಕನಸನ್ನು ಸಾಕಾರಗೊಳಿಸಲು ಶ್ರಮಿಸಲಾಗಿದೆ. ದಿವಂಗತ ಸುರೇಶ ಅಂಗಡಿಯವರು ರೈಲ್ವೆ ಸಚಿವರಿದ್ದಾಗ ಈ ಯೋಜನೆಗೆ ಚಾಲನೆ ಸಿಕ್ಕಿತ್ತು. 2023ರ ವೇಳೆಗೆ ರೈಲು ಸಂಚಾರ ಆರಂಭವಾಗಬೇಕಿತ್ತಾದರೂ, ಅವರ ಅಕಾಲಿಕ ನಿಧನದಿಂದ ಯೋಜನೆ ಆಮೆಗತಿಯಲ್ಲಿ ಸಾಗಿತು.ಈಗಿನ ರೈಲ್ವೆ ಸಚಿವರಾದ ವಿ. ಸೊಮಣ್ಣ ಅವರ ನೇತೃತ್ವದಲ್ಲಿ ಈ ಮಾರ್ಗದ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ. ಅವರಿಗೆ ಸಾಥ್ ನೀಡುತ್ತಿರುವ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ ರೋಷನ್ ಅವರ ಕಾರ್ಯವೈಖರಿಗೆ ಅಭಿನಂದನೆಗಳು.
ಕಿತ್ತೂರಿನಲ್ಲಿ ಬೃಹತ್ ರೈಲು ಜಂಕ್ಷನ್ ನಿರ್ಮಾಣದ ಅಗತ್ಯಬೆಳಗಾವಿ, ಧಾರವಾಡ, ಮತ್ತು ಹುಬ್ಬಳ್ಳಿ ಅವಳಿ ಮಹಾನಗರಗಳು ಅತೀ ವೇಗವಾಗಿ ಬೆಳೆಯುತ್ತಿವೆ. ಈ ನಗರಗಳ ರೈಲು ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆ ಎದುರಾಗಿದೆ. ದಿನೇ ದಿನೇ ರೈಲುಗಳ ಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ 40-50 ವರ್ಷಗಳಲ್ಲಿ ಈ ಸಮಸ್ಯೆ ತೀವ್ರಗೊಳ್ಳಲಿದೆ. ಈಗಲೇ ದೂರದೃಷ್ಟಿಯಿಂದ ಯೋಜನೆ ರೂಪಿಸದಿದ್ದರೆ, ಭವಿಷ್ಯದಲ್ಲಿ ದೊಡ್ಡ ಸವಾಲುಗಳು ಎದುರಾಗಲಿವೆ. ಕಿತ್ತೂರಿನಲ್ಲಿ ಬೃಹತ್ ರೈಲು ಜಂಕ್ಷನ್ ನಿರ್ಮಿಸುವುದು ಈ ಸಮಸ್ಯೆಗೆ ಪರಿಹಾರವಾಗಬಲ್ಲದು.
ಹುಬ್ಬಳ್ಳಿ, ಧಾರವಾಡ, ಮತ್ತು ಬೆಳಗಾವಿಯಲ್ಲಿ ಗಂಟೆಗಟ್ಟಲೇ ನಿಲ್ಲುವ ರೈಲುಗಳನ್ನು ಕಿತ್ತೂರು ಜಂಕ್ಷನ್‌ನಲ್ಲಿ ನಿಲುಗಡೆ ಮಾಡಬಹುದು. ಬೆಳಗಾವಿಯಿಂದ ಮಿರಜ್, ಮುಂಬಯಿ, ದಿಲ್ಲಿ ಕಡೆಗೆ ಹಾಗೂ ಹುಬ್ಬಳ್ಳಿಯಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್ ಕಡೆಗೆ ಹೋಗುವ ರೈಲುಗಳು ಕಿತ್ತೂರಿನಿಂದಲೇ ಸಂಚಾರ ಆರಂಭಿಸಿದರೆ, ಈ ನಗರಗಳಲ್ಲಿ ರೈಲು ದಟ್ಟಣೆ ಕಡಿಮೆಯಾಗಲಿದೆ. ಇದರಿಂದ ರೈಲು ಸಂಚಾರದ ದಕ್ಷತೆಯೂ ಹೆಚ್ಚಲಿದೆ. ತೇಗೂರು ಹತ್ತಿರ ಧಾರವಾಡ ಜಿಲ್ಲಾ ಗೂಡ್ಸ್ ಸೆಡ್ ಹುಬ್ಬಳ್ಳಿ ಜಂಕ್ಷನ್‌ನ ಗೂಡ್ಸ್ ಸೆಡ್‌ನ್ನು ಕೆಲವೇ ವರ್ಷಗಳ ಹಿಂದೆ ರಾಯಾಪುರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಈಗಾಗಲೇ ಅಲ್ಲಿ ಸ್ಥಳಾವಕಾಶದ ಕೊರತೆ ಮತ್ತು ಸಂಚಾರ ದಟ್ಟಣೆಯ ಸಮಸ್ಯೆ ಶುರುವಾಗಿದೆ. ಗೂಡ್ಸ್ ರೈಲುಗಳಿಂದ ಸರಕು ಸಾಗಿಸುವ ಲಾರಿಗಳು ಧಾರವಾಡ ನಗರದ ಮೂಲಕ ಹಾದು ಹೋಗುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಸರಕು ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ, ಧಾರವಾಡ ನಗರದ ಹೊರಗಡೆ ತೇಗೂರು ಹತ್ತಿರ ಧಾರವಾಡ ಜಿಲ್ಲಾ ಗೂಡ್ಸ್ ಸೆಡ್ ನಿರ್ಮಿಸಬೇಕು. ಇದರಿಂದ ಲಾರಿಗಳು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಸುಲಭವಾಗಿ ಸಂಚರಿಸಬಹುದು. ಇದು ಸಂಚಾರ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಸರಕು ಸಾಗಣೆಯ ದಕ್ಷತೆಯನ್ನು ಹೆಚ್ಚಿಸಲಿದೆ.
ಬಾಗೇವಾಡಿ ಹತ್ತಿರ ಬೆಳಗಾವಿ ಜಿಲ್ಲಾ ಗೂಡ್ಸ್ ಸೆಡ್ ಬೆಳಗಾವಿ ಜಂಕ್ಷನ್‌ನಿಂದ ದೇಶೂರ, ನಂತರ ಸಾಂಬ್ರಾಕ್ಕೆ ಸ್ಥಳಾಂತರಗೊಂಡ ಗೂಡ್ಸ್ ಸೆಡ್‌ನಲ್ಲಿ ಹಲವು ಸಮಸ್ಯೆಗಳಿವೆ. ಮಳೆಗಾಲದಲ್ಲಿ ಗೂಡ್ಸ್ ರೈಲುಗಳನ್ನು ಖಾಲಿ ಮಾಡಲು ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ಗೋಡೌನ್‌ಗಳ ಕೊರತೆ, ರಸಗೊಬ್ಬರ, ಅಕ್ಕಿ, ಸಿಮೆಂಟ್‌ನಂತಹ ಸರಕುಗಳ ಉತ್ಪಾದನೆ ಮಾಡುವ ಕಂಪನಿಗಳಿಗೆ ತೊಂದರೆಯಾಗಿದೆ. ಈ ಕಾರಣದಿಂದ ಹೆಚ್ಚಿನ ಗೂಡ್ಸ್ ರೈಲುಗಳನ್ನು ರಾಯಬಾಗಕ್ಕೆ ಕಳುಹಿಸಲಾಗುತ್ತಿದ್ದು, ಅಲ್ಲಿಂದ ಬೆಳಗಾವಿ, ಕಿತ್ತೂರಿಗೆ ಸರಕು ಸಾಗಿಸಲು ವೆಚ್ಚ ಹೆಚ್ಚಾಗುತ್ತಿದೆ.ಈ ಸಮಸ್ಯೆಗೆ ಪರಿಹಾರವಾಗಿ, ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವಿರುವ ಬಾಗೇವಾಡಿ ಹತ್ತಿರ ಬೆಳಗಾವಿ ಜಿಲ್ಲಾ ಗೂಡ್ಸ್ ಸೆಡ್ ನಿರ್ಮಿಸಬೇಕು. ಇದರಿಂದ ಲಾರಿಗಳು ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಗೆ ಸುಲಭವಾಗಿ ಸಂಚರಿಸಬಹುದು. ವಿಶಾಲವಾದ ಗೂಡ್ಸ್ ಸೆಡ್ ನಿರ್ಮಾಣಕ್ಕೆ ಇಲ್ಲಿ ಸಾಕಷ್ಟು ಅವಕಾಶವಿದೆ.
ಕಿತ್ತೂರಿನಲ್ಲಿ ಏಕೀಕೃತ ಬೃಹತ್ ಗೂಡ್ಸ್ ಸೆಡ್: ದೂರದೃಷ್ಟಿಯ ಯೋಜನೆಬೆಳಗಾವಿ ಮತ್ತು ಹುಬ್ಬಳ್ಳಿ ಅವಳಿ ನಗರಗಳಾಗಿರುವುದರಿಂದ, ಕಿತ್ತೂರಿನಲ್ಲಿ ಒಂದು ಬೃಹತ್ ಗೂಡ್ಸ್ ಸೆಡ್ ನಿರ್ಮಿಸುವುದು ದೀರ್ಘಕಾಲೀನ ಪರಿಹಾರವಾಗಬಹುದು. ಬೆಳಗಾವಿ ಮತ್ತು ಹುಬ್ಬಳ್ಳಿ ಕೇವಲ 45 ಕಿ.ಮೀ. ಅಂತರದಲ್ಲಿದ್ದು, ಧಾರವಾಡವೂ ಸಮೀಪದಲ್ಲಿದೆ. ಕಿತ್ತೂರಿನಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವಿರುವುದರಿಂದ, ಸರಕು ತುಂಬಿಕೊಂಡ ಲಾರಿಗಳು ಎಲ್ಲ ಕಡೆಗೂ ಸುಲಭವಾಗಿ ತಲುಪಬಹುದು. ಈಗ ನೂತನವಾಗಿ ನಿರ್ಮಿಸುತ್ತಿರುವ ರೈಲು ಮಾರ್ಗದ ಜೊತೆಗೆ ಈ ಯೋಜನೆಯನ್ನು ಕೈಗೊಂಡರೆ, ಭವಿಷ್ಯದಲ್ಲಿ ಭೂಸ್ವಾಧೀನದ ಸಮಸ್ಯೆ ತಪ್ಪಲಿದೆ.ವಿನಂತಿಸನ್ಮಾನ್ಯ ರೈಲ್ವೆ ಸಚಿವ ಶ್ರೀ ವಿ. ಸೊಮಣ್ಣ ಅವರು ಈ ಸಮಸ್ಯೆಗಳಿಗೆ ಈಗಲೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ಕಿತ್ತೂರಿನಲ್ಲಿ ಬೃಹತ್ ರೈಲು ಜಂಕ್ಷನ್, ತೇಗೂರು ಹತ್ತಿರ ಧಾರವಾಡ ಜಿಲ್ಲಾ ಗೂಡ್ಸ್ ಸೆಡ್, ಮತ್ತು ಬಾಗೇವಾಡಿ ಹತ್ತಿರ ಬೆಳಗಾವಿ ಜಿಲ್ಲಾ ಗೂಡ್ಸ್ ಸೆಡ್ ನಿರ್ಮಾಣದಿಂದ ಈ ಭಾಗದ ರೈಲ್ವೆ ಸೌಲಭ್ಯ ಸುಧಾರಿಸುವ ಜೊತೆಗೆ, ಸ್ವಾತಂತ್ರ್ಯದ ಪ್ರಥಮ ಯುದ್ಧದ ಐತಿಹಾಸಿಕ ಕಿತ್ತೂರು ನೆಲಕ್ಕೆ ನ್ಯಾಯ ಒದಗಲಿದೆ.ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ದೂರದೃಷ್ಟಿಯ ಯೋಜನೆಗೆ ಗಮನ ಹರಿಸಿ, ಈಗಲೇ ಕಾರ್ಯೋನ್ಮುಖರಾಗಬೇಕೆಂದು ಹಿರಿಯ ನಿಕಟಪೂರ್ವ ವರದಿಗಾರರಾದ ಚಿಕ್ಕನಂದಿಹಳ್ಳಿಯ ಚಂದ್ರಗೌಡ ಪಾಟೀಲ ಅವರು ಕೋರಿದ್ದಾರೆ.
ಸುದ್ದಿ: ಬಿ Chi….Kittur




