ಮೂರು ದಿನಗಳಿಂದ ನಡೆದ ಭಾರತ- ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನದ ಶೆಲ್, ಡ್ರೋನ್ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ ಎಂದು ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಭಾನುವಾರ ದೃಢಪಡಿಸಿದರು.
DGMO ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7 ರಂದು ಪಾಕಿಸ್ತಾನಿ ಸೇನೆ ನಡೆಸಿದ ಶೆಲ್ ದಾಳಿಯಿಂದ ನಮ್ಮ ನೆಲದಲ್ಲಿ ಯಾವುದೇ ಹಾನಿಯಾಗದಂತೆ ಭಾರತದ ವಾಯು ರಕ್ಷಣಾ ವ್ಯವಸ್ಥೆ ಸನ್ನದ್ಧವಾಗಿತ್ತು. ಮೇ 8 ಮತ್ತು 9 ರಂದು ರಾತ್ರಿ 10-30 ಗಂಟೆಗೂ ಮುನ್ನಾ ಭಾರತದ ಹಲವಾರು ನಗರಗಳಲ್ಲಿ ಡ್ರೋನ್‌ಗಳು, ಮಾನವ ರಹಿತ ವೈಮಾನಿಕ ವಿಮಾನಗಳು (UAVS) ಮತ್ತು ಮಾನವರಹಿತ ಯುದ್ಧ ವೈಮಾನಿಕ ವಾಹನ (UCAVS) ಮೂಲಕ ದಾಳಿಗೆ ಯತ್ನಿಸಲಾಗಿತ್ತು. ಮೇ 7 ರಂದು UAVಗಳನ್ನು ನಿಯೋಜಿಸಿದ್ದ ಪಾಕಿಸ್ತಾನ ಮರುದಿನ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ನಾಗರಿಕರಿಗೆ ಕಿರುಕುಳ ನೀಡಲು ಹೆಚ್ಚಿನ ಹೆಲಿಕಾಪ್ಟರ್ ಗಳನ್ನು ಕಳುಹಿಸಿತ್ತು ಎಂದು ತಿಳಿಸಿದರು.
700 ಡ್ರೋನ್ ಗಳ ಧ್ವಂಸ: ವಾಯುನೆಲೆ, ನಾಗರಿಕರನ್ನು ಗುರಿಯಾಗಿಸಿ ನಿರಂತರ ದಾಳಿಯ ನಂತರ ಪಾಕ್ ನ್ನು ಭಾರತ ಹಿಮ್ಮೆಟ್ಟಿಸಿತು. ಮೇ 8 ರ ಸಂಜೆ ಪಾಕಿಸ್ತಾನ ಭಾರತೀಯ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಯುದ್ಧ ವಿಮಾನಗಳು ಮತ್ತು ಅನೇಕ ಡ್ರೋನ್ ದಾಳಿ ನಡೆಸಿತು. ಆದರೆ ಪೆಚೋರಾ, ಗರುಡಾ ಸ್ನೈಪರ್ಸ್ ಮತ್ತುIAF ಸಮರ್‌ನಂತಹ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳಿಂದ 700 ಡ್ರೋನ್ ಗಳನ್ನು ಹೊಡೆದುರುಳಿಸಲಾಯಿತುಎಂದು ತಿಳಿಸಿದರು.
ಶತ್ರು ರಾಷ್ಟ್ರದ ರಕ್ಷಣಾ ವ್ಯವಸ್ಥೆ ಗುರಿಯಾಗಿಸುವ ಸಾಮರ್ಥ್ಯ: DGMO ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಶತ್ರುರಾಷ್ಟ್ರದ ಯಾವುದೇ ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಆದರೆ ಸಂಯಮದಿಂದ ಕಾರ್ಯನಿರ್ವಹಿಸುತ್ತದೆ ಎಂದು ಪುನರುಚ್ಚರಿಸಿದರು.




