ಬೆಳಗಾವಿ: “ಭೀಮಗಡ ಸೇರಿ ರಾಜ್ಯದ ವಿವಿಧೆಡೆ ಅರಣ್ಯ ಪ್ರದೇಶದಲ್ಲಿ ವಾಸವಿರುವ ಜನರಿಗೆ ಶಾಶ್ವತ ನೆಲೆ ಕಟ್ಟಿಕೊಡಲು ಒಂದು ಸಾವಿರ ಕೋಟಿ ಅನುದಾನದ ಅವಶ್ಯಕತೆ ಇದೆ. ಅನುದಾನ ನೀಡುವ ಸಂಬಂಧ ಕೇಂದ್ರದ ಪರಿಸರ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಕಳಿಸಿದ್ದೇವೆ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
“ಹಿಂದಿನ ತಲೆಮಾರಿನ ಅರಣ್ಯವಾಸಿಗಳಿಗೆ ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದು ಚೆನ್ನಾಗಿ ತಿಳಿದಿತ್ತು, ಆದರೆ ಇಂದಿನ ಪೀಳಿಗೆಯ ಅರಣ್ಯವಾಸಿಗಳಿಗೆ ಅಷ್ಟು ಪರಿಣತಿ ಇಲ್ಲ. ಹೀಗಾಗಿ ನಾಗರಿಕ ಸಮಾಜದಲ್ಲಿ ಅವರು ಬದುಕು ಕಟ್ಟಿಕೊಳ್ಳಲು ಈ ಸ್ಥಳಾಂತರ ಸಹಕಾರಿಯಾಗಲಿದೆ. ಮಾನವನ ಹಸ್ತಕ್ಷೇಪ ಇಲ್ಲದಿದ್ದರೆ ಅರಣ್ಯ ಸಮೃದ್ಧವಾಗಿ ಬೆಳೆಯುತ್ತದೆ. ಪ್ರಸಕ್ತ ಕಾಲಘಟ್ಟದಲ್ಲಿ ಅರಣ್ಯದೊಳಗಿನ ವಾಸ ಕಷ್ಟಸಾಧ್ಯ. ಜಗತ್ತು ಆಧುನಿಕವಾಗಿ ಸಾಗುತ್ತಿರುವಾಗ, ದಶಕಗಳಿಂದ ಅರಣ್ಯದಲ್ಲೇ ಮೂಲಸೌಕರ್ಯ ಇಲ್ಲದೆ ಕೆಲವರು ವಾಸಿಸುತ್ತಿದ್ದಾರೆ ಇವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಈಗ ನಡೆಯುತ್ತಿದೆ” ಎಂದರು.
“ಭೀಮಗಢದ ಅರಣ್ಯ ವ್ಯಾಪ್ತಿಯಲ್ಲಿ 13 ಗ್ರಾಮಗಳಿದ್ದು ಇಲ್ಲಿ ಸುಮಾರು 754 ಕುಟುಂಬಗಳು ವಾಸಿಸುತ್ತಿವೆ. ಈ ಪೈಕಿ ತಳೆವಾಡಿಯ 27 ಕುಟುಂಬಗಳು ಸ್ವಯಂ ಪ್ರೇರಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ತೀರ್ಮಾನಿಸಿದ್ದಾರೆ. ಶೇ.60ರಷ್ಟು ಪಶ್ಚಿಮಘಟ್ಟ ಪ್ರದೇಶ ಕರ್ನಾಟಕ ರಾಜ್ಯದಲ್ಲಿದೆ. ಅಪರೂಪದ ಬಾಲ ಇಲ್ಲದ ಬಾವಲಿ ತಾಣ ಇದಾಗಿದೆ. ಶ್ರೀಮಂತ, ಸಮೃದ್ಧ ಅರಣ್ಯ ಸಂಪತ್ತು ಹೊಂದಿದೆ. ಹಾಗಾಗಿ, ಇದರ ರಕ್ಷಣೆ ನಮ್ಮೆಲ್ಲರ ಹೊಣೆ” ಎಂದು ಈಶ್ವರ ಖಂಡ್ರೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಠಲ ಹಲಗೇಕರ್ ಮಾತನಾಡಿ, “ಸರ್ಕಾರದಿಂದ ವಿಶೇಷ ಯೋಜನೆ ರೂಪಿಸಿ 27 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಸರ್ಕಾರದಿಂದ ಅವರಿಗೆ ಸಮೀಪದಲ್ಲೆ 1 ಎಕರೆ ಜಾಗ ಕೊಡಬೇಕು. ಅದಕ್ಕೆ ತಳೇವಾಡಿ ಅಂತಾ ಹೆಸರಿಟ್ಟು ಅಲ್ಲಿ ಅವರು ಜೀವನ ಸಾಗಿಸುತ್ತಾರೆ. ಒಂದೇ ಊರಲ್ಲಿ ಅವರು ನೆಲೆ ನಿಲ್ಲುವಂತೆ ಮಾಡಿಕೊಟ್ಟರೆ ತುಂಬಾ ಅನುಕೂಲ ಆಗುತ್ತದೆ. 13 ಗ್ರಾಮಗಳ ಪೈಕಿ ತಳೇವಾಡಿ, ಅಮಗಾಂವ, ಗವಾಳಿ, ಪಾಸ್ತೋಳಿ, ಗೊಂಗಲಾ ಗ್ರಾಮಗಳಲ್ಲಿ ಬಹಳಷ್ಟು ಸಮಸ್ಯೆ ಇದೆ” ಎಂದು ಮನವಿ ಮಾಡಿಕೊಂಡರು.





