ವಿಧಾನಸೌಧ ಮುಂದೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್​ಗೆ ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಿರುವ ಸಿಎಂ


ಬೆಂಗಳೂರು: ನೆರೆಯ ಆಂಧ್ರಪ್ರದೇಶಕ್ಕೆ ಮೇ 21 ರಂದು ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಾಗುತ್ತಿದೆ. ಇದು ನೆರೆ ರಾಜ್ಯದೊಂದಿಗಿನ ಸೌಹಾರ್ದ ಸಂಬಂಧ ಹೆಚ್ಚಿಸುವುದರ ಜೊತೆಗೆ, ಕರ್ನಾಟಕ ಗಡಿ ಮತ್ತು ಆಂಧ್ರದ ಆನೆ-ಮಾನವ ಸಂಘರ್ಷಕ್ಕೆ ಪರಿಹಾರ ಒದಗಿಸಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರಿಗೆ ಪಳಗಿಸಿದ ಆನೆಗಳನ್ನು ಹಸ್ತಾಂತರ ಮಾಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ಆಗಸ್ಟ್​​ನಲ್ಲಿ ಬೆಂಗಳೂರಿನಲ್ಲಿ ನಡೆದ ಆನೆ-ಮಾನವ ಸಂಘರ್ಷ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಕರ್ನಾಟಕ – ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಆಗಿರುವ ಉತ್ತಮ ರೂಢಿಗಳ ವಿನಿಮಯ ಒಪ್ಪಂದದ ಭಾಗವಾಗಿ ಈ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದು ಖಂಡ್ರೆ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಆಗಸ್ಟ್ 8ರಂದು ಪವನ್ ಕಲ್ಯಾಣ್ ಅವರು ಬೆಂಗಳೂರಿಗೆ ಆಗಮಿಸಿ ತಮ್ಮನ್ನು ಭೇಟಿ ಮಾಡಿ, ಆಂಧ್ರದಲ್ಲಿ ಹೆಚ್ಚುತ್ತಿರುವ ಪುಂಡಾನೆಗಳ ಸೆರೆಗೆ ಕುಮ್ಕಿ ಆನೆ ನೀಡುವಂತೆ ಮತ್ತು ತಮ್ಮ ರಾಜ್ಯದ ಮಾವುತರು ಮತ್ತು ಅರಣ್ಯ ಸಿಬ್ಬಂದಿಗೆ ಆನೆ ಸೆರೆ ಕಾರ್ಯಾಚರಣೆಯ ತರಬೇತಿ ನೀಡುವಂತೆ ಮನವಿ ಮಾಡಿದ್ದರು. ಸೆಪ್ಟೆಂಬರ್ 27ರಂದು ತಮ್ಮ ನೇತೃತ್ವದ ನಿಯೋಗ ವಿಜಯವಾಡಕ್ಕೆ ಭೇಟಿ ನೀಡಿದ್ದ ವೇಳೆ ಈ ಸಂಬಂಧ ಎರಡೂ ರಾಜ್ಯಗಳ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಮೇ 21ರಂದು ಈ ಆನೆಗಳನ್ನು ಹಸ್ತಾಂತರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


Leave a Comment

Your email address will not be published. Required fields are marked *