ಸುಹಾಸ್​ ಕೊಲೆ: ಹಿಂದೂ ಕಾರ್ಯಕರ್ತರ ವಿರುದ್ಧ ಹೆಡ್​ ಕಾನ್ಸ್ಟೇಬಲ್ ರಶೀದ್ ದೂರು.


ಮಂಗಳೂರು: ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಜ್ಪೆ ಹೆಡ್​ ಕಾನ್ಸ್​ಟೇಬಲ್ ರಶೀದ್ ಕೂಡ ಪರೋಕ್ಷವಾಗಿ ಕೈಜೋಡಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪ ಮಾಡಿತ್ತು. ಈ ಆರೋಪ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಹೆಡ್​ ಕಾನ್ಸ್​ಟೇಬಲ್ ರಶೀದ್ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್​ ಹಾಕಲಾಗಿದೆ. ಈ ಸಂಬಂಧ ಹೆಡ್​ ಕಾನ್ಸ್​ಟೇಬಲ್ ರಶೀದ್ ಅವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್​ಐಆರ್​ ದಾಖಲಾಗಿದೆ.

ಹಿಂದೂ ಮುಖಂಡ ಮೂಡಬಿದ್ರೆಯ ಸಮಿತ್ ರಾಜ್ ದರೆಗುಡ್ಡೆ, ಹಿಂದೂ ಜಾಗರಣ ವೇದಿಕೆ ಮುಖಂಡ ಕೆ.ಟಿ.ಉಲ್ಲಾಸ್ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ವಿನಾಕಾರಣ ನನ್ನ ಹೆಸರು ತಂದಿದ್ದಾರೆ. ಯಾವುದೇ ಆಧಾರ ಇಲ್ಲದೆ ನನ್ನ ಹೆಸರು ಹಾಕಿ ಅವಹೇಳನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಲಾಗುತ್ತಿದೆ ಎಂದು ಹೆಡ್​ ಕಾನ್ಸ್​ಟೇಬಲ್ ರಶೀದ್ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಹೆಡ್​ ಕಾನ್ಸ್ಟೇಬಲ್ ರಶೀದ್ ವಿರುದ್ಧ ಗಂಭೀರ ಆರೋಪ

ಮಂಗಳೂರಿನ ಬಜ್ಪೆ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಶೀದ್ ಈ ಕೃತ್ಯದ ಹಿಂದೆ ಇರುವ ಅನುಮಾನವಿದೆ. ಸುಹಾಸ್ ಶೆಟ್ಟಿ ಸ್ನೇಹಿತರು ಆ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಕೆಟಿ ಉಲ್ಲಾಸ್ ಹೇಳಿದ್ದಾರೆ. ಸುಹಾಸ್ ಶೆಟ್ಟಿಗೆ ರಶೀದ್ ಬಹಳಷ್ಟು ಟಾರ್ಚರ್ ಕೊಡುತ್ತಿದ್ದರು. ಮೂರು ದಿನದ ಹಿಂದಷ್ಟೇ ಶಸ್ತ್ರಾಸ್ತ್ರ ತೆಗೆಸಿದ್ದರು. ಆ ಸುದ್ದಿ ಆರೋಪಿಗಳಿಗೆ ಹೇಗೆ ಗೊತ್ತಾಯಿತು? ಬಲವಾದ ಮಾಹಿತಿಯನ್ನು ರಶೀದ್ ಆರೋಪಿಗಳಿಗೆ ನೀಡಿರಬೇಕು. ರಶೀದ್ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಕೆಟಿ ಉಲ್ಲಾಸ್ ಆಗ್ರಹಿಸಿದ್ದರು.


Leave a Comment

Your email address will not be published. Required fields are marked *