ಬೆಂಗಳೂರು: ರಾಯಲ್ಸ್ ಚಾಲೆಂಜರ್ಸ್ ವಿಜಯೋತ್ಸವದಲ್ಲಿ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಸಾವನ್ನಪ್ಪಿರುವ ಘಟನೆ ಸಂಬಂಧ ತಮ್ಮನ್ನು ಬಂಧಿಸಿರುವ ಕ್ರಮ ಪ್ರಶ್ನಿಸಿ ಆರ್ಸಿಬಿ ಮಾರ್ಕೆಂಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ (ಬುಧವಾರ) ಮುಂದೂಡಿದೆ.
ನಿಕಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್ ಮತ್ತು ಶಮಂತ್ ಮಾವಿನಕೆರೆ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಸುಪ್ರೀಂ ಕೋರ್ಟ್ ಹಲವು ತೀರ್ಪುಗಳನ್ನು ಉಲ್ಲೇಖಿಸಿ, ಸೋಸಲೆ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಅವರ ಪಾತ್ರ ಏನು ಎಂಬುದೇ ಗೊತ್ತಿಲ್ಲ. ಎಫ್ಐಆರ್ನಲ್ಲಿಯೂ ಅವರ ಹೆಸರು ಪ್ರಸ್ತಾಪಿಸಿಲ್ಲ. ಅರ್ಜಿದಾರರನ್ನು ಬಂಧಿಸಿರುವುದು ಕಾನೂನು ಬಾಹಿರವಾಗಿದ್ದರೆ ಅವರನ್ನು ಒಂದು ಕ್ಷಣವೂ ಜೈಲಿನಲ್ಲಿಡುವುದಕ್ಕೆ ಅವಕಾಶವಿಲ್ಲ ಎಂದು ವಾದ ಮಂಡಿಸಿದರು.
ಪ್ರಕರಣದಲ್ಲಿ ಅರ್ಜಿದಾರ ಸೋಸಲೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪ್ರತ್ಯೇಕ ತನಿಖಾ ಸಂಸ್ಥೆಯಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಸಿಸಿಬಿ ಅಧಿಕಾರ ಚಲಾಯಿಸಲಾಗುವುದಿಲ್ಲ. ಅವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿರುವುದು ಕಾನೂನು ಬಾಹಿರವಾಗಿದೆ ಎಂದು ಪೀಠಕ್ಕೆ ಹೇಳಿದರು.
ಕೇವಲ ನಮನ್ನೇಕೆ ಬಂಧಿಸಲಾಗಿದೆ?: ಅಲ್ಲದೇ, ಘಟನೆ ಸಂಬಂಧ ಸರ್ಕಾರವು, ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಿದೆ. ರಾಜಕೀಯ ಕಾರ್ಯದರ್ಶಿಯಾಗಿದ್ದವರನ್ನು ಆ ಹುದ್ದೆಯಿಂದ ಕೈಬಿಟ್ಟಿದೆ. ಗುಪ್ತಚರ ಇಲಾಖೆ ಮುಖ್ಯಸ್ಥರನ್ನು ವರ್ಗಾಯಿಸಿದೆ. ಅವರು ತಪ್ಪು ಮಾಡಿದ್ದಾರೆ ಎಂಬ ಕಾರಣದಿಂದ ಈ ಕ್ರಮಕ್ಕೆ ಮುಂದಾಗಿದ್ದಲ್ಲಿ, ಅವರನ್ನು ಏಕೆ ಬಂಧಿಸಿಲ್ಲ. ಆರ್ಸಿಬಿ, ಡಿಎನ್ಎ ಸಂಸ್ಥೆಗೆ ಸೇರಿದವರನ್ನು ಮಾತ್ರ ಏಕೆ ಬಂಧಿಸಲಾಗಿದೆ. ಅವರ ವಿರುದ್ಧ ಗಂಭೀರ ಅಪರಾಧದ ಸೆಕ್ಷನ್ಗಳನ್ನು ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು.
ಕಾಲಾವಕಾಶ ಕೇಳಿದ ಸರ್ಕಾರದ ಪರ ವಕೀಲರು: ಈ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೇಳಿದರು. ಅಲ್ಲದೆ, ಪ್ರಕರಣ ಸಂಬಂಧಿಸಿದಂತೆ ಇಡೀ ರಾತ್ರಿ ಕೆಲಸ ಮಾಡಿದ್ದೇವೆ. ಎಲ್ಲ ದಾಖಲೆಗಳನ್ನು ಹಾಜರು ಪಡಿಸಲಾಗುವುದು. ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಈ ಅಂಶ ದಾಖಲಿಸಿಕೊಂಡ ಪೀಠ, ವಿಚಾರಣೆಯನ್ನು ನಾಳೆಗೆ ಮುಂದೂಡಿತು.





