ಬೆಂಗಳೂರು, : ಅಶ್ಲೀಲ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದು, ಇತ್ತ ಪ್ರಜ್ವಲ್ ರೇವಣ್ಣ ಕಾರಿನ ಚಾಲಕ ಕಾರ್ತಿಕ್ ಕೋರ್ಟ್ ಮುಂದೆ ಸ್ಫೋಟಕ ಸಾಕ್ಷ್ಯ ನುಡಿದಿದ್ದಾರೆ. ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿ 2000 ಅಶ್ಲೀಲ ಫೋಟೋ, 40 ರಿಂದ 50 ವಿಡಿಯೋಗಳಿದ್ದವು ಎಂದು ಕಾರ್ತಿಕ್, ಇಂದು (ಮೇ 26) ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಅಲ್ಲದೇ ಮೊಬೈಲ್ ನಲ್ಲಿದ್ದ ಅಶ್ಲೀಲ ವಿಡಿಯೋಗಳು ಹೇಗೆ ಸಿಕ್ಕವು ಎನ್ನುವ ಬಗ್ಗೆ ಕೋರ್ಟ್ ಮುಂದೆ ಹೇಳಿದ್ದಾರೆ.
ಕೋರ್ಟ್ ಮುಂದೆ ಕಾರ್ತಿಕ್ ನೀಡಿರುವ ಹೇಳಿಕೆ ಇಲ್ಲಿದೆ
2009ರಿಂದ ಹೆಚ್.ಡಿ.ರೇವಣ್ಣ ಬಳಿ ಡ್ರೈವರ್ ಆಗಿದ್ದೆ. ನಂತರ ಭವಾನಿ ರೇವಣ್ಣ, ಸೂರಜ್ ರೇವಣ್ಣ ಕಾರಿಗೂ ಚಾಲಕನಾಗಿದ್ದೆ. 2018ರಿಂದ ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿ ಕೆಲಸ ಮಾಡಿದ್ದೇನೆ.ಆ ಸಂದರ್ಭದಲ್ಲಿ ಕ್ಷೇತ್ರ ಸಂಚಾರ ಮಾಡುತ್ತಿದ್ದಾಗ ಕಾರಿನಲ್ಲೇ ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸುತ್ತಿದ್ದರು. ನಾನು ಅವರ ಕಡೆ ನೋಡಿದಾಗ ಫೋನ್ ತಿರುಗಿಸಿಕೊಳ್ಳುತ್ತಿದ್ದರು ಎಂದು ಕೊರ್ಟ್ ಮುಂದೆ ಸಾಕ್ಷ್ಯ ನುಡಿದಿದ್ದಾರೆ.





