ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ; ಸಿದ್ದರಾಮಯ್ಯ


ಬೆಂಗಳೂರು, ಮೇ 21: ಮಾನ್ಯತಾ ಟೆಕ್ಪಾರ್ಕ್ ಬಳಿ ರಾಜಕಾಲುವೆ ಪರಿಶೀಲನೆ ನಡೆಸಿದ್ದು ಅಲ್ಲಿ ರಾಜಕಾಲುವೆ ಒತ್ತುವರಿ ಗಮನಿಸಲಾಗಿದೆ. ಒತ್ತುವರಿಯನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಿದ್ದೇನೆ. ಮಾನ್ಯತಾ ಟೆಕ್ಪಾರ್ಕ್ ಸಿಇಒ ಅವರು ಸ್ವಂತ ರಸ್ತೆಯಲ್ಲಿ 90ದಿನಗಳಲ್ಲಿ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿಯಲು ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ನಗರದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಬುಧವಾರ (ಮೇ. 21) ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಭೈರತಿ ಸುರೇಶ್ ಹಾಗೂ ಇತರ ಜನಪ್ರತಿನಿಧಿಗಳು ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್‌ಬಿಆರ್ ಬಡಾವಣೆಯ ಐದನೇ ಹಂತದ ರಾಜಕಾಲುವೆ ಸಮಸ್ಯೆಯಿದ್ದು, ಅಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಗೆ ಅಲ್ಲಿ ತಡೆಗೋಡೆ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ. ಚರಂಡಿಗೆ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.


Leave a Comment

Your email address will not be published. Required fields are marked *