18 ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್; ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ


ಬೆಂಗಳೂರು: ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತು ಆದೇಶವನ್ನು ವಾಪಸ್​​ ಪಡೆಯಲು ತೀರ್ಮಾನಿಸಲಾಗಿದೆ. ಕಳೆದ ಅಧಿವೇಶನದಲ್ಲಿ ಸದನದಿಂದ ಅಮಾನತ್ತಾದ 18 ಶಾಸಕರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದ್ದು, ಎರಡು ತಿಂಗಳ ನಂತರ ಅಮಾನತು ಆದೇಶ ವಾಪಸ್ ಪಡೆಯಲಾಗಿದೆ.

ಭಾನುವಾರ ಸಂಜೆ ವಿಧಾನಸೌಧದಲ್ಲಿ ಸ್ಪೀಕರ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕಾನೂನು ಸಚಿವ ಹೆಚ್​.ಕೆ.ಪಾಟೀಲ್, ಸಭಾಪತಿ ರುದ್ರಪ್ಪ ಲಮಾಣಿ, ವಿಪಕ್ಷ ನಾಯಕ ಆರ್.ಅಶೋಕ್ ಮತ್ತಿತರರು ಸಭೆ ನಡೆಸಿ, ಅಮಾನತು ಆದೇಶ ವಾಪಸ್ ಪಡೆಯುವ ನಿರ್ಣಯ ಮಾಡಲಾಯಿತು

ರಾಜ್ಯಪಾಲರಿಗೂ ದೂರು ಕೊಟ್ಟಿದ್ದ ಬಿಜೆಪಿಗರು: ಕಳೆದ ಮಾರ್ಚ್ 21ರಂದು ಸದನದಲ್ಲಿ ಹನಿಟ್ರ್ಯಾಪ್ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆಂಬ ಕಾರಣಕ್ಕೆ, ಬಿಜೆಪಿಯ 18 ಶಾಸಕರನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಆರು ತಿಂಗಳ ಕಾಲ ಅಮಾನತುಗೊಳಿಸಿ‌ ಆದೇಶ‌ ಹೊರಡಿಸಿದ್ದರು. ಈ ಸಂಬಂಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಆದೇಶ ವಾಪಸ್‌ಗೆ ಆಗ್ರಹಿಸಿ ಸ್ಪೀಕರ್​​ಗೆ ಪತ್ರ ಬರೆದಿದ್ದರು. ರಾಜ್ಯಪಾಲರಿಗೂ ದೂರು ಕೊಟ್ಟಿದ್ದ ಬಿಜೆಪಿಗರು ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದರು.

ಸಾಕಷ್ಟು ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕಳೆದ ಸಚಿವ ಸಂಪುಟ ಸಭೆಯಲ್ಲಿ ಅಮಾನತು ಆದೇಶ ವಾಪಸ್​​ಗೆ ಒಲವು ವ್ಯಕ್ತವಾಗಿತ್ತು. ಇಂದು ಸರ್ಕಾರದ ಜೊತೆ ಚರ್ಚಿಸಿ, ಸ್ಪೀಕರ್ ಖಾದರ್ ತಮ್ಮ ವಿವೇಚನಾಧಿಕಾರ ಬಳಸಿ ಅಮಾನತು ಆದೇಶ ವಾಪಸ್ ಪಡೆದಿದ್ದಾರೆ.

ಸಭೆ ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, ”ಶಾಸಕರ ಅಮಾನತು ಆದೇಶ ವಾಪಸ್​​ ಪಡೆಯಲಾಗಿದೆ. ಈ ಸಂಬಂಧ ಶೀಘ್ರ ಅಧಿಕೃತ ಆದೇಶ ಹೊರಡಿಸಲಾಗುವುದು. ಅವರು ಶಾಸಕ‌ ಮಿತ್ರರು, ಯಾವುದೇ ಷರತ್ತು ಹಾಕಿಲ್ಲ. ಆ ಘಳಿಗೆಯಲ್ಲಿ ಆಗಿದೆ. ಈಗ ತಪ್ಪಾಗಿದೆ ಅಂತಾ ಅವರಿಗೆ ಗೊತ್ತಾಗಿದೆ. ಮುಂದೆ ದುರ್ವರ್ತನೆ ತೋರಲ್ಲ, ಆ ವಿಶ್ವಾಸ ನನಗೆ ಇದೆ. ನನ್ನ ವಿಶ್ವಾಸಕ್ಕೆ ಕಪ್ಪು ಚುಕ್ಕೆ ತರಲ್ಲ ಅಂದುಕೊಂಡಿದ್ದೇನೆ” ಎಂದು ತಿಳಿಸಿದರು.


Leave a Comment

Your email address will not be published. Required fields are marked *