Fact Check: ವಿಡಿಯೋದಲ್ಲಿರುವ ಮುಸ್ಲಿಂ ಹುಡುಗಿ ತನ್ನ ಧರ್ಮ ತೊರೆದು ಹಿಂದೂ ಹುಡುಗನನ್ನು ಮದುವೆಯಾಗಿದ್ದು ನಿಜವೇ?


ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಹಿಜಾಬ್ ಧರಿಸಿರುವ ಹುಡುಗಿ ಹಿಂದೂ ಹುಡುಗನನ್ನು ಮದುವೆಯಾಗಿ ಮುಸ್ಲಿಂ ಧರ್ಮವನ್ನು ತೊರೆದಿದ್ದಾಳೆ ಎಂಬ ಹೇಳಿಕೆ ನೀಡಲಾಗಿದೆ. ಈ ಸುದ್ದಿ ನಿಜವೇ ಎಂಬ ಕುರಿತ ಮಾಹಿತಿ ಇಲ್ಲಿದೆ ಓದಿ.

Fact Check: ವಿಡಿಯೋದಲ್ಲಿರುವ ಮುಸ್ಲಿಂ ಹುಡುಗಿ ತನ್ನ ಧರ್ಮ ತೊರೆದು ಹಿಂದೂ ಹುಡುಗನನ್ನು ಮದುವೆಯಾಗಿದ್ದು ನಿಜವೇ?

ಹಿಜಾಬ್ ಧರಿಸಿರುವ ಹುಡುಗಿಯೊಬ್ಬಳು ದೇವಸ್ಥಾನದ ಹೊರಗೆ ಹುಡುಗನ ಜೊತೆ ರೀಲ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಹಿದಾ ಖಾನ್ ಎಂಬ ಮುಸ್ಲಿಂ ಯುವತಿ ಹಿಂದೂ ಹುಡುಗನನ್ನು ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ವಿಡಿಯೋದಲ್ಲಿ ಒಂದು ಸ್ಥಳದಲ್ಲಿ ಓಂಕಾರೇಶ್ವರ ಎಂದು ಬರೆಯಲಾಗಿದೆ. ಈ ವಿಡಿಯೋದ ಒಂದು ಭಾಗದಲ್ಲಿ ಇಬ್ಬರ ಹಣೆಯಲ್ಲಿಯೂ ತಿಲಕವಿದೆ. ಇವರು ಹಿಂದೂ ದೇವಸ್ಥಾನದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಅಪ್ಲೋಡ್ ಮಾಡಿ, ‘ಜಹೀದಾ ಖಾನ್… ಹಿಂದೂ ಹುಡುಗನನ್ನು ಮದುವೆಯಾದ ನಂತರ ಮುಸ್ಲಿಂ ಧರ್ಮವನ್ನು ತ್ಯಜಿಸಿದರು. ಸನಾತನ ಧರ್ಮಕ್ಕೆ ಸ್ವಾಗತ. ಜೈ ಶ್ರೀ ರಾಮ್’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹುಡುಗಿಯ ಹೆಸರು ಜಹಿದಾ ಖಾನ್ ಆಗಿಲ್ಲ, ಅಥವಾ ಅವರು ಹಿಂದೂ ಹುಡುಗನನ್ನು ಮದುವೆಯಾಗಿಲ್ಲ, ಮುಸ್ಲಿಂ ಧರ್ಮವನ್ನು ತೊರೆದಿಲ್ಲ ಎಂದು ಕಂಡುಹಿಡಿದಿದೆ. ಈಕೆ ಮುಂಬೈ ಮೂಲದ ಶಬ್ನಮ್ ಶೇಖ್ ಮತ್ತು ವಿಡಿಯೋದಲ್ಲಿರುವ ಹುಡುಗ ಆಕೆಯ ಸ್ನೇಹಿತ ಶುಭಂ.

ನಾವು ‘ಮುಸ್ಲಿಂ ಹುಡುಗಿ’ ಮತ್ತು ‘ಹಿಂದೂ ದೇವಾಲಯ’ ಮುಂತಾದ ಕೀವರ್ಡ್‌ಗಳೊಂದಿಗೆ ಗೂಗಲ್​ನಲ್ಲಿ ಹುಡುಕಿದಾಗ, ಜನವರಿ 3, 2024 ರಂದು, ಟಿವ9 ಉತ್ತರ ಪ್ರದೇಶ ಯೂಟ್ಯೂಬ್ ಚಾನೆಲ್​ನಲ್ಲಿ ‘ಶಬ್ನಮ್ ಶೇಖ್ ಎಂಬ ಹುಡುಗಿ 41 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ಮುಂಬೈನಿಂದ ಅಯೋಧ್ಯೆಗೆ ಹೊರಟಿದ್ದಾಳೆ’ ಎಂದು ಶೀರ್ಷಿಕೆಯೊಂದಿಗೆ ವಿಡಿಯೋ ಅಪ್ಲೋಡ್ ಮಾಡಿರುವುದು ಸಿಕ್ಕಿದೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಶಬ್ನಮ್ ಅವರ ಇನ್‌ಸ್ಟಾಗ್ರಾಮ್ ಖಾತೆ ‘@shernishaikh8291’ ಅನ್ನು ನೋಡಿದಾಗ ಅವರು ಮಾರ್ಚ್ 5 ರಂದು ಇನ್​ಸ್ಟಾದಲ್ಲಿ ಸದ್ಯ ವೈರಲ್ ಆಗುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿರುವುದು ಸಿಕ್ಕಿತು. ಅಲ್ಲದೆ, ‘ಹರ-ಹರ್ ಶಂಭು, ಸೈಕಲ್ ಮೂಲಕ 12 ಜ್ಯೋತಿರ್ಲಿಂಗಗಳಿಗೆ ಪ್ರಯಾಣ’ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.https://www.instagram.com/reel/C4IAgc8IFI4/embed/captioned/?

ಈ ಕುರಿತು ಹೆಚ್ಚಿನ ಮಾಹಿತಿಯನ್ನು ಸ್ವತಃ ಶಬ್ನಮ್ ಅವರು ಖಾಸಗಿ ಸುದ್ದಿ ವಾಹಿನಿಗೆ ನೀಡಿದ್ದಾರೆ. ‘ನನ್ನ ಹೆಸರು ಜಹಿದಾ ಖಾನ್ ಆಗಲಿ ಅಥವಾ ತಾನು ಯಾವುದೇ ಹಿಂದೂ ಹುಡುಗನನ್ನು ಮದುವೆಯಾಗಿಲ್ಲ ಅಥವಾ ಮುಸ್ಲಿಂ ಧರ್ಮವನ್ನು ತೊರೆದಿಲ್ಲ. ನನಗೆ ಈಗ 22 ವರ್ಷ ಮತ್ತು ಮುಂದಿನ 3-4 ವರ್ಷಗಳವರೆಗೆ ಮದುವೆಯಾಗುವ ಉದ್ದೇಶವಿಲ್ಲ. ಈ ವಿಡಿಯೋದಲ್ಲಿ ಕಾಣುವ ಹುಡುಗನ ಹೆಸರು ಶುಭಂ ಗುಪ್ತ ಮತ್ತು ಅವನು ನನ್ನ ಸ್ನೇಹಿತ. 12 ಜ್ಯೋತಿರ್ಲಿಂಗಗಳು ಈ ವೀಡಿಯೊವನ್ನು ಪ್ರವಾಸದ ಸಮಯದಲ್ಲಿ ಮಾಡಲಾಗಿದೆ.’’ ಎಂದು ಹೇಳಿದ್ದಾರೆ.

ಈ ಮೂಲಕ ಮುಂಬೈನ ಮುಸ್ಲಿಂ ಹುಡುಗಿ ಶಬ್ನಮ್ ಶೇಖ್ ಹಿಂದೂ ಹುಡುಗನನ್ನು ಮದುವೆಯಾಗುವ ಮೂಲಕ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.


Leave a Comment

Your email address will not be published. Required fields are marked *