ಪೋಕ್ಸೋ ಕಾಯ್ದೆ ಅಡಿ ಕೇಸ್ ಹಿನ್ನೆಲೆ; ಜಾನಿ ಮಾಸ್ಟರ್​ಗೆ ಘೋಷಿಸಿದ್ದ ರಾಷ್ಟ್ರಪ್ರಶಸ್ತಿ ರದ್ದು


ಜಾನಿ ಮಾಸ್ಟರ್ ಅನ್ನು ಅತ್ಯಾಚಾರ ಆರೋಪದಡಿ ಕಳೆದ ತಿಂಗಳು 21ರಂದು ತೆಲಂಗಾಣ ಪೊಲೀಸರು ಬಂಧಿಸಿದ್ದರು. 21 ವರ್ಷದ ಡ್ಯಾನ್ಸರ್ ಒಬ್ಬರು ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದರು, ಯುವತಿಯ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಪೋಕ್ಸೋ ಪ್ರಕರಣ ಸಹ ದಾಖಲು ಮಾಡಿದ್ದರು. ಹೀಗಾಗಿ ಅವಾರ್ಡ್ ಕ್ಯಾನ್ಸಲ್ ಆಗಿದೆ.

ಪೋಕ್ಸೋ ಕಾಯ್ದೆ ಅಡಿ ಕೇಸ್ ಹಿನ್ನೆಲೆ; ಜಾನಿ ಮಾಸ್ಟರ್​ಗೆ ಘೋಷಿಸಿದ್ದ ರಾಷ್ಟ್ರಪ್ರಶಸ್ತಿ ರದ್ದು  

ಜಾನಿ ಮಾಸ್ಟರ್

ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜಾನಿ ಮಾಸ್ಟರ್​ಗೆ ಮತ್ತೊಂದು ದೊಡ್ಡ ಶಾಕ್ ಸಿಕ್ಕಿದೆ. ಜಾನಿ ಮಾಸ್ಟರ್​ಗೆ ನೀಡಲಾಗಿದ್ದ ರಾಷ್ಟ್ರ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದರಿಂದ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

ತಮಿಳಿನ ‘ತಿರುಚಿತ್ರಂಬಲಂ’ ಚಿತ್ರಕ್ಕಾಗಿ ಜಾನಿ ಮಾಸ್ಟರ್ ಅತ್ಯುತ್ತಮ ನೃತ್ಯ ಸಂಯೋಜಕ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು. ಅಕ್ಟೋಬರ್ 8ರಂದು ದೆಹಲಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು. ಪ್ರಶಸ್ತಿ ಸ್ವೀಕರಿಸಲು ಜಾನಿ ಮಾಸ್ಟರ್‌ಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಪ್ರಶಸ್ತಿ ರದ್ದತಿಯಿಂದಾಗಿ ಜಾನಿ ಮಾಸ್ಟರ್ ಮಧ್ಯಂತರ ಜಾಮೀನು ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಆರೋಪಿ ಜಾನಿ ಮಾಸ್ಟರ್​ಗೆ ತಾತ್ಕಾಲಿಕ ಜಾಮೀನು

ಜಾನಿ ಮಾಸ್ಟರ್ ‘ಅತ್ಯುತ್ತಮ ನೃತ್ಯ ಸಂಯೋಜಕ’ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾದ ಕೆಲವು ದಿನಗಳ ನಂತರ, ಅತ್ಯಾಚಾರದ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು. ತಮಗೆ ಲೈಂಗಿಕ ಕಿರುಕುಳ ಆಗಿದೆ ಎಂದು ಅವರ ಸಹೋದ್ಯೋಗಿಯೇ ಆರೋಪಿಸಿದ್ದರು. ಹೈದರಾಬಾದ್ ಮತ್ತು ಮುಂಬೈನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜಾನಿ ಮತ್ತು ಅವರ ಪತ್ನಿ ತಮಗೆ ಥಳಿಸುತ್ತಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಂತಸ್ತೆಗೆ ಈಗ 21 ವರ್ಷ. ಅಪ್ರಾಪ್ತೆ ಆದಾಗಿನಿಂದಲೂ ತಮಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದೆ. ನರಸಿಂಗಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮಧ್ಯಂತರ ಜಾಮೀನು

‘ಅಕ್ಟೋಬರ್ 8ರಂದು ದೆಹಲಿಯಲ್ಲಿ ರಾಷ್ಟ್ರಪತಿಯವರ ಕೈಯಿಂದ ಪ್ರಶಸ್ತಿಯನ್ನು ಸ್ವೀಕರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಿ’ ಎಂದು ಜಾನಿ ಮಾಸ್ಟರ್ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ಜಾನಿ ಮಾಸ್ಟರ್‌ಗೆ ನಾಲ್ಕು ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಪ್ರಕರಣ ಸಂಬಂಧ ಯಾರ ಮೇಲೂ ಪ್ರಭಾವ ಬೀರಬಾರದು ಎಂದು ಕೋರ್ಟ್ ಷರತ್ತು ವಿಧಿಸಿತ್ತು. ಈಗ ಅವರ ಜಾಮೀನು ರದ್ದಾಗೋ ಸಾಧ್ಯತೆ ಇದೆ.


Leave a Comment

Your email address will not be published. Required fields are marked *