ವೆಟ್ಟೈಯಾನ್’ ಹೆಸರು ವಿವಾದ: ಸ್ಪಷ್ಟನೆ ಕೊಟ್ಟ ಚಿತ್ರತಂಡ


ರಜನೀಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಇಂದು (ಅಕ್ಟೋಬರ್ 10) ಬಿಡುಗಡೆ ಆಗಿದೆ. ಸಿನಿಮಾದ ಹೆಸರಿನ ಬಗ್ಗೆ ಆಂಧ್ರ ಹಾಗೂ ತೆಲಂಗಾಣದಲ್ಲಿ ವಿವಾದ ಎದ್ದಿತ್ತು, ಇದೀಗ ಸಿನಿಮಾದ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಹೇಳಿಕೆ ಬಿಡುಗಡೆ ಆಗಿದೆ.

‘ವೆಟ್ಟೈಯಾನ್’ ಹೆಸರು ವಿವಾದ: ಸ್ಪಷ್ಟನೆ ಕೊಟ್ಟ ಚಿತ್ರತಂಡ

ರಜನೀಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಇಂದು (ಅಕ್ಟೋಬರ್ 10) ಬಿಡುಗಡೆ ಆಗಿದೆ. ಈ ತಮಿಳು ಸಿನಿಮಾ ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿದೆ. ಆದರೆ ಎಲ್ಲ ಭಾಷೆಗಳಲ್ಲಿಯೂ ಈ ಸಿನಿಮಾದ ಹೆಸರು ‘ವೆಟ್ಟೆಯಾನ್’ ಎಂದೇ ಇದೆ. ಈ ಬಗ್ಗೆ ತೆಲುಗು ಚಿತ್ರರಂಗದ ನಿರ್ದೇಶಕರೊಬ್ಬರು ಅಸಮಾಧಾನ ಹೊರಹಾಕಿದ್ದರು. ಸಿನಿಮಾವನ್ನು ಅದರ ಮೂಲ ತಮಿಳು ಹೆಸರಿನಲ್ಲಿಯೇ ಬಿಡುಗಡೆ ಮಾಡಲಾಗುತ್ತಿದೆ. ಅದರ ಬದಲಿಗೆ ತೆಲುಗಿನ ಹೆಸರು ‘ವೇಟಗಾಡು’ ಎಂದು ಇಡಬಹುದಾಗಿತ್ತು’ ಎಂದಿದ್ದರು. ಇದು ವೈರಲ್ ಆಗಿತ್ತು.

ಇದೀಗ ಈ ಬಗ್ಗೆ ಸಿನಿಮಾದ ನಿರ್ಮಾಣ ಸಂಸ್ಥೆ ಲೈಕಾ ಹೇಳಿಕೆ ಬಿಡುಗಡೆ ಮಾಡಿದ್ದು, ‘ಲೈಕಾ ಸಂಸ್ಥೆ ವರ್ಷಗಳಿಂದಲೂ ಹಲವು ತೆಲುಗು ಚಿತ್ರರಂಗದ ಪ್ರತಿಭಾವಂತರೊಟ್ಟಿಗೆ ಕೆಲಸ ಮಾಡುತ್ತಾ ಬಂದಿದೆ. ಮಾತ್ರವಲ್ಲದೆ ‘ಆರ್​ಆರ್​ಆರ್’, ‘ಸೀತಾರಾಮಂ’ ಇನ್ನೂ ಹಲವು ಅತ್ಯುತ್ತಮ ತೆಲುಗು ಸಿನಿಮಾಗಳನ್ನು ತಮಿಳುನಾಡಿನಲ್ಲಿ ವಿತರಣೆ ಸಹ ಮಾಡಿದೆ. ಇದೀಗ ನಾವು ರಜನೀಕಾಂತ್, ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್ ಇನ್ನಿತರರು ನಟಿಸಿರುವ ‘ವೆಟ್ಟೈಯಾನ್’ ಸಿನಿಮಾ ನಿರ್ಮಾಣ ಮಾಡಿ, ಅದನ್ನು ತೆಲುಗು ಸೇರಿದಂತೆ ಇತರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಿದ್ದೇವೆ’ ಎಂದಿದೆ.

ಮುಂದುವರೆದು, ‘ನಾವು ಮೊದಲಿಗೆ ಸಿನಿಮಾಕ್ಕೆ ಯಾವ ಭಾಷೆಗಳಲ್ಲಿ ಬಿಡುಗಡೆ ಆಗಲಿದೆಯೋ ಅದೇ ಭಾಷೆಯ ಹೆಸರಿಡಲು ಯೋಜಿಸಿದ್ದೆವು. ‘ವೆಟ್ಟೈಯಾನ್’ ಸಿನಿಮಾ ತೆಲುಗಿನಲ್ಲಿ ‘ವೇಟಗಾಡು’ ಎಂದು ಹೆಸರಿಡುವ ಉದ್ದೇಶ ಇತ್ತು. ಹೆಸರು ರಿಜಿಸ್ಟರ್ ಮಾಡಿಸುವ ಪ್ರಯತ್ನವನ್ನೂ ಸಹ ಮಾಡಿದೆವು. ಆದರೆ ಆ ಟೈಟಲ್ ನಮಗೆ ಸಿಗಲಿಲ್ಲ. ಸಿನಿಮಾಕ್ಕೆ ಸೂಕ್ತ ಹೆಸರು ಅದಾಗಿತ್ತು, ಅದು ಸಿಗದ ಕಾರಣ ಬೇರೆ ಹೆಸರಿಡುವುದು ಸೂಕ್ತವಲ್ಲ ಎನಿಸಿ ಮೂಲ ಹೆಸರಿನಲ್ಲಿಯೇ ಎಲ್ಲ ಭಾಷೆಗಳಲ್ಲಿಯೂ ಬಿಡುಗಡೆ ಮಾಡಿದ್ದೇವೆ’ ಎಂದಿದೆ.

ಇದನ್ನೂ ಓದಿ:ರಜನೀಕಾಂತ್ ಜೊತೆ ಸಮಂತಾ ಹೋಲಿಕೆ, ಖ್ಯಾತ ನಿರ್ದೇಶಕ ಕೊಟ್ಟ ಕಾರಣವೇನು?

‘ನಮ್ಮ ಸಿನಿಮಾ ಅಕ್ಟೋಬರ್ 10 ರಂದು ಬಿಡುಗಡೆ ಆಗಿದ್ದು, ತೆಲುಗು ಪ್ರೇಕ್ಷಕರು ಸದಾ ಒಳ್ಳೆಯ ಸಿನಿಮಾಕ್ಕೆ ಅದರಲ್ಲೂ ಕೌಟುಂಬಿಕ ಸಿನಿಮಾಕ್ಕೆ ಮೊದಲಿನಿಂದಲೂ ಬೆಂಬಲ ನೀಡುತ್ತಲೇ ಬಂದಿದ್ದು, ಈ ಸಿನಿಮಾಕ್ಕೂ ಬೆಂಬಲ ನೀಡಬೇಕೆಂದು ಮನವಿ ಮಾಡುತ್ತಿದ್ದೇವೆ. ತೆಲುಗಿನಲ್ಲಿ ಬಿಡುಗಡೆ ಆಗುವ ಸಿನಿಮಾಗಳಿಗೆ ತೆಲುಗು ಹೆಸರುಗಳನ್ನೇ ಇಡಬೇಕೆನ್ನುವ ನಿಮ್ಮ ನ್ಯಾಯಯುತ ಮನವಿಯನ್ನು ನಾವು ಪುರಸ್ಕರಿಸಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಬದಲಾವಣೆ ಮಾಡುತ್ತೇವೆ’ ಎಂದಿದ್ದಾರೆ.

ರಜನೀಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ ಇನ್ನೂ ಕೆಲವು ಜನಪ್ರಿಯ ನಟರು ನಟಿಸಿದ್ದಾರೆ. ಸಿನಿಮಾವು ಪೊಲೀಸ್ ವ್ಯವಸ್ಥೆ ಹಾಗೂ ನ್ಯಾಯಾಂಗ ವ್ಯವಸ್ಥೆ ನಡುವಿನ ತಿಕ್ಕಾಟದ ಬಗೆಗಿನ ಕತೆ ಒಳಗೊಂಡಿದೆ. ಸಿನಿಮಾವನ್ನು ಟಿಜೆ ಜ್ಞಾನವೇಲು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


Leave a Comment

Your email address will not be published. Required fields are marked *