ಮೇ 13ರ ವೇಳೆಗೆ ಸಿದ್ಧವಾಗಿರಿ; ಐಪಿಎಲ್ ಶೀಘ್ರದಲ್ಲೇ ಮತ್ತೆ ಆರಂಭ


ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಶೀಘ್ರದಲ್ಲೇ ಮತ್ತೆ ಆರಂಭವಾಗುವ ಸೂಚನೆ ಸಿಕ್ಕಿದೆ. ಮೇ 13 ರ ಮಂಗಳವಾರದೊಳಗೆ ಭಾರತಕ್ಕೆ ಮರಳುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎಲ್ಲಾ ಫ್ರಾಂಚೈಸಿಗಳನ್ನು ಸೂಚನೆ ಕೊಟ್ಟಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯ ನಂತರ ಐಪಿಎಲ್ ಪಂದ್ಯಗಳನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಲಾಗಿತ್ತು.

ಶೀಘ್ರದಲ್ಲೇ ಪಂದ್ಯಾವಳಿಯನ್ನು ಮತ್ತೆ ಆರಂಭಿಸಿ ಆದಷ್ಟು ಬೇಗ ಮುಕ್ತಾಯಗೊಳಿಸಲು ಬಿಸಿಸಿಐ ಉತ್ಸಾಹ ತೋರಿದೆ. ಮೊದಲ ವೇಳಾಪಟ್ಟಿಯ ಪ್ರಕಾರವೇ ನಡೆದಿದ್ದರೆ ಮೇ 25ರಂದು ಐಪಿಎಲ್ 2025ರ ಆವೃತ್ತಿಯ ಫೈನಲ್ ನಡೆಯಬೇಕಿತ್ತು.

ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವ ಪ್ರಕಾರ, ಪಂಜಾಬ್ ಕಿಂಗ್ಸ್ (PBKS) ಹೊರತುಪಡಿಸಿ ಎಲ್ಲಾ ಫ್ರಾಂಚೈಸಿಗಳು ಮಂಗಳವಾರದೊಳಗೆ ತಮ್ಮ ಸ್ಥಳಗಳಿಗೆ ಹಿಂತಿರುಗುವಂತೆ ತಿಳಿಸಲಾಗಿದೆ. ಕಳೆದ ವಾರ ಧರ್ಮಶಾಲಾವನ್ನು ತವರಿನ ಅಂಗಳವಾಗಿ ಹೊಂದಿದ್ದ ಪಂಜಾಬ್ ಕಿಂಗ್ಸ್ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ಆಡಿಸುವ ಸಾಧ್ಯತೆ ಇದೆ. ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಮಂಗಳವಾರದೊಳಗೆ ತಮ್ಮ ತಮ್ಮ ತವರಿನ ಅಂಗಳದಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಲು ತಿಳಿಸಲಾಗಿದೆ. ಪಂಜಾಬ್ ತಟಸ್ಥ ಸ್ಥಳವನ್ನು ಹೊಂದಿದ್ದರೂ ತಂಡದ ಆಟಗಾರರು ಎಲ್ಲಿ ಸೇರಬೇಕು ಎನ್ನುವುದನ್ನು ದೃಢೀಕರಿಸಲಾಗಿಲ್ಲ. ಐಪಿಎಲ್ ಅನ್ನು ನಿಗದಿತ ದಿನದಂದು ಮುಗಿಸಲು ಮಂಡಳಿಯು ಪ್ರತಿ ದಿನ ಎರಡು ಪಂದ್ಯಗಳನ್ನು ಆಡಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. 12 ಲೀಗ್ ಹಂತದ ಪಂದ್ಯಗಳು ಮತ್ತು ನಾಲ್ಕು ಪ್ಲೇಆಫ್ ಪಂದ್ಯಗಳು ಇನ್ನೂ ಬಾಕಿ ಉಳಿದಿವೆ. ಒಟ್ಟು 16 ಪಂದ್ಯಗಳನ್ನು ಮುಗಿಸಲು ಮತ್ತು ಸಮಯಕ್ಕೆ ಸರಿಯಾಗಿ ಪಂದ್ಯಾವಳಿಯನ್ನು ಪೂರ್ಣಗೊಳಿಸಲು ಮಂಡಳಿಯು ಬಹು ಡಬಲ್ ಹೆಡರ್‌ಗಳನ್ನು ಯೋಜಿಸುತ್ತಿದೆ ಎಂದು ನಂಬಲಾಗಿದೆ. ಭದ್ರತಾ ಅನುಮತಿಗಳು ಮತ್ತು ಲಾಜಿಸ್ಟಿಕಲ್ ಅನುಮೋದನೆಗಳನ್ನು ಅವಲಂಬಿಸಿ ಶೀಘ್ರದಲ್ಲೇ ಮತ್ತೆ ಪಂದ್ಯಾವಳಿಯನ್ನು ಆರಂಭಿಸಲಾಗುತ್ತದೆ.


Leave a Comment

Your email address will not be published. Required fields are marked *