ಹೆಬ್ಬಾಳ ಫ್ಲೈಓವರ್‌ ಮೇಲೆ ವಾಹನ ಸಂಚಾರ ಎಷ್ಟು ದಿನ ಬಂದ್‌..? ಯಾಕೆ?


ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ಕೆ.ಆರ್.ಪುರ ಕಡೆಯಿಂದ ಮೇಖ್ರಿ ಸರ್ಕಲ್‌ವರೆಗಿನ ಹೆಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿ ಕ್ಯಾಂಪ್​ಗಳನ್ನು ನಿರ್ಮಿಸುವ ಕಾಮಗಾರಿ ಶುರುವಾಗಿದ್ದು, ಈ ಕಾಮಗಾರಿಯ ಭಾಗವಾಗಿ ರೈಲ್ವೆ ಹಳಿಗಳ ಮೇಲೆ 33.5 ಮೀಟರ್‌ ಉದ್ದದ 7 ಉಕ್ಕಿನ ಗರ್ಡರ್‌ಗಳನ್ನು ಅಳವಡಿಸುವ ಕಾಮಗಾರಿ ಶನಿವಾರದಿಂದಲೇ ಶುರುವಾಗಿ ಮೇ 21ರವರೆಗೆ ನಡೆಯಲಿದೆ. ಈ ಕಾರಣಕ್ಕೆ ರಾತ್ರಿ ವೇಳೆ ಮೂರು ಗಂಟೆಗಳ ಕಾಲ ಫ್ಲೈಓವರ್‌ ಬಂದ್‌ ಮಾಡಲಿದ್ದಾರೆ.

ಕಾಮಗಾರಿ ನಡೆಯುವ ಕಾರಣಕ್ಕೆ ಪ್ರತಿದಿನ ಮೂರು ಗಂಟೆಗಳ ಕಾಲ, ಮಧ್ಯರಾತ್ರಿ 12ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ಈ ಫ್ಲೈಓವರ್‌ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ವಾಹನ ಸವಾರರು ಈ ಸಮಯದಲ್ಲಿ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಸೂಚಿಸಿದ್ದಾರೆ. ಹೆಬ್ಬಾಳ ಮೇಲ್ಸೇತುವೆಯ ಎಸ್ಟೀಮ್ ಮಾಲ್​ನಿಂದ ಮೇಖ್ರಿ ಸರ್ಕಲ್‌ ಕಡೆಗೆ ಹೋಗುವವರು ರಾತ್ರಿ 12ರಿಂದ ಬೆಳಿಗ್ಗೆ 3 ಗಂಟೆವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಬಾಕಿ ಸಮಯದಲ್ಲಿ ಎಂದಿನಂತೆ ವಾಹನಗಳ ಸಂಚಾರಕ್ಕೆ ಅವಕಾಶ ಇರುತ್ತದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆ ಮೂಲಕ ಹೆಬ್ಬಾಳ ಸರ್ಕಲ್‌ ಮೂಲಕ ತುಮಕೂರು ಮಾರ್ಗವಾಗಿ ಚಲಿಸಿ ಮುಂದೆ ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು, ನ್ಯೂ ಬಿಇಎಲ್ ರಸ್ತೆ ಮೂಲಕ ಮೇಖ್ರಿ ಸರ್ಕಲ್‌ ಅನ್ನು ತಲುಪಬಹುದು ಎಂದು ಸೂಚನೆ ನೀಡಿದೆ. ರಾತ್ರಿ ವೇಳೆ ವಾಹನ ಸಂಚಾರ ಕಡಿಮೆ ಇರುವುದರಿಂದ ಈ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಹಾಗಾಗಿ ವಾಹನ ಸವಾರರು ಸಹಕರಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.


Leave a Comment

Your email address will not be published. Required fields are marked *