ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ: ರೈಲ್ವೆಯ ನಾಲ್ವರು ಅಧಿಕಾರಿಗಳ ವಿರುದ್ಧ ಪ್ರಕರಣ


ಮೈಸೂರು: ನಗರದ ಕೇಂದ್ರೀಯ ರೈಲ್ವೆ ವರ್ಕ್‌ಶಾಪ್‌ನಲ್ಲಿನ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳಾ ಅಧಿಕಾರಿ ಸೇರಿದಂತೆ ನಾಲ್ವರು ಹಿರಿಯ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ವರ್ಕ್‌ಶಾಪ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ನೀಡಿದ ದೂರಿನ ಮೇರೆಗೆ ಮೂವರು ಸೀನಿಯರ್ ಸೆಕ್ಷನ್ ಇಂಜಿನಿಯರ್​ಗಳು ಹಾಗೂ ಓರ್ವ ಮಹಿಳಾ ಅಧಿಕಾರಿಯ ವಿರುದ್ದ ಅಶೋಕಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೂರಿನ ವಿವರ: ಕೆಲಸದ ವೇಳೆ ಇಂಜಿನಿಯರ್​ವೊಬ್ಬರು ಲೈಂಗಿಕ ಪದ ಬಳಸಿ ಮಾತನಾಡುವುದು, ಲೈಂಗಿಕ ಚಿತ್ರ ಬಿಡಿಸಿ ತೋರಿಸುವುದು, ಕೈಯಲ್ಲಿ ಕೆಟ್ಟದಾಗಿ ಸನ್ನೆ ಮಾಡಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಈ ಬಗ್ಗೆ ಆಂತರಿಕ ಸಮಿತಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಮಹಿಳೆಯು ದೂರಿದ್ದಾರೆ.

ಅಲ್ಲದೆ, ನಾನು ಕೆಲಸ ಮಾಡುವಾಗ ಫೋಟೋ ಹಾಗೂ ವಿಡಿಯೋ ತೆಗೆದಿದ್ದಾರೆ. ಇದಕ್ಕೆ ಮಹಿಳಾ ಸೀನಿಯರ್ ಸೆಕ್ಷನ್ ಇಂಜಿನಿಯರ್ ಕೂಡ ಬೆಂಬಲ ನೀಡಿದ್ದಾರೆ. ಮೂವರು ಅಧಿಕಾರಿಗಳು ಸೇರಿ ಲೈಂಗಿಕ ಕಿರುಕುಳ ನೀಡುತ್ತ ಕೆಲಸ ಮಾಡಲು ತೊಂದರೆ ಮಾಡುತ್ತಿದ್ದಾರೆ. ಜೊತೆಗೆೆ, ಇಂಜಿನಿಯರ್​ವೊಬ್ಬರು ಬಿಹಾರದಿಂದ ಹುಡುಗರನ್ನು ಕರೆಸಿ ಸಾಕ್ಷಿ ಇಲ್ಲದಂತೆ, ಶೂಟ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರು ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


Leave a Comment

Your email address will not be published. Required fields are marked *