ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ ಸರ್ಕಾರ ಇರುವವರೆಗೂ ಇರುತ್ತೆ


ಗೃಹಲಕ್ಷ್ಮಿ ಹಣವನ್ನು ನಾವೇನು ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ ಎಂದು ಶಾಕಿಂಗ್‌ ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಮತ್ತೆ ಗ್ಯಾರಂಟಿ ಯೋಜನೆಗಳ ಬಗ್ಗೆ ಯೂಟರ್ನ್‌ ಹೊಡೆದಿದ್ದಾರೆ. ಕಾಂಗ್ರೆಸ್‌ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ವಿಜಯನಗರದ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್‌ ಸಮರ್ಪಣಾ ಸಂಕಲ್ಪ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲಿಯವರೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರುತ್ತದೋ, ಅಲ್ಲಿಯವರೆಗೂ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ. ಇದು ನಮ್ಮ ವಚನ ಎಂದು ಭರವಸೆ ನೀಡಿದ್ದಾರೆ.

ಈವರೆಗೂ ನಾವು ನುಡಿದಂತೆ ನಡೆದಿದ್ದೇವೆ, ಮುಂದೆಯೂ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತೇವೆ. ಕಳೆದ ಎರಡು ವರ್ಷಗಳಲ್ಲಿ ಕೇವಲ ಗ್ಯಾರಂಟಿಗಳಷ್ಟೇ ಅಲ್ಲ, ಭ್ರಷ್ಟಾಚಾರಕ್ಕೆ ನಾವು ಕಡಿವಾಣ ಹಾಕಿದ್ದೇವೆ. ಪ್ರತಿ ಇಲಾಖೆಯ ಮೂಲಕವೂ ಹೊಸ ಕಾರ್ಯಕ್ರಮ ಹಾಕಿಕೊಂಡು, ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುತ್ತಿದ್ದೇವೆ. ಗ್ರಾಮೀಣ ರಸ್ತೆಗಳ ಸುಧಾರಣೆ, ಉದ್ಯೋಗ ಸೃಷ್ಟಿಗೆ, ರೈತರಿಗೆ ಅನುಕೂಲ ಮಾಡಿಕೊಡಲು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ರಾಜ್ಯದ ಕೆರೆಗಳನ್ನು ತುಂಬಿಸಲು ಕಾರ್ಯಕ್ರಮ ರೂಪಿಸಿದ್ದೇವೆ ಎಂದು ವಿವರಿಸಿದ್ದಾರೆ. ರಾಹುಲ್‌ ಗಾಂಧಿ ಅವರು ನಮ್ಮ ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆ ನಡೆಸಿದ ಎಲ್ಲ ಕ್ಷೇತ್ರಗಳನ್ನೂ ನಾವು ಗೆದ್ದಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತೆ. ಅದರಲ್ಲೂ ಕಲ್ಯಾಣ ಕರ್ನಾಟಕ ನಮ್ಮ ಸರ್ಕಾರ ಸ್ಥಾಪನೆಗೆ ಅತಿ ಹೆಚ್ಚು ಶಾಸಕರುಗಳನ್ನು ಕೊಟ್ಟಿದೆ. ಅದಕ್ಕಾಗಿ ಈ ಭಾಗದ ಅಭಿವೃದ್ಧಿಗೆ ವಾರ್ಷಿಕವಾಗಿ 5 ಸಾವಿರ ಕೋಟಿ ಅನುದಾನವನ್ನು ನೀಡುತ್ತಿದ್ದೇವೆ. ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದ ಏಳಿಗೆ ಕಣ್ಣಲ್ಲಿ ನೋಡಲು ಆಗುತ್ತಿಲ್ಲ. ಅವರು ಟೀಕೆಗಳನ್ನ ಮಾಡುತ್ತಿರಲಿ. ನಾವು ಜನರ ಬದುಕನ್ನು ಉಳಿಸುವ ಕೆಲಸವನ್ನು ಮುಂದುವರಿಸುತ್ತೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ನಮ್ಮ ಗ್ಯಾರಂಟಿಗಳು ಸಾಕ್ಷಿ ಎಂದು ಸಮರ್ಥಿಸಿಕೊಂಡಿದ್ದಾರೆ.


Leave a Comment

Your email address will not be published. Required fields are marked *