ಪ್ರೀತಿಸಿ ಮದುವೆಯಾಗಿ ಹಣ, ಚಿನ್ನಾಭರಣ ಪಡೆದು ಪರಾರಿ: ಪೊಲೀಸ್​ ಠಾಣೆ ಮೆಟ್ಟಿಲೇರಿದ ಗರ್ಭಿಣಿ


ಬೆಂಗಳೂರು: ಪ್ರೀತಿಸಿ ಮದುವೆಯಾದವನು ಸಂಸಾರಕ್ಕೆ ಹೊಸ ಮನೆ ಮಾಡುವುದಾಗಿ ಹಣ ಚಿನ್ನ ಪಡೆದುಕೊಂಡು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಹೇಮಂತ್​​ ಎಂಬಾತನ ವಿರುದ್ಧ ಆರೋಪ ಕೇಳಿ ಬಂದಿದ್ದು, ಮೂರೇ ತಿಂಗಳಿಗೆ ತನ್ನನ್ನು ತೊರೆದು ಪರಾರಿಯಾದ ಪತಿಗಾಗಿ ಸಂತ್ರಸ್ತ ಮಹಿಳೆ ಬೆಂಗಳೂರು ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಕುಣಿಗಲ್​ ಮೂಲದ ಸಂತ್ರಸ್ತೆ, ಬೆಂಗಳೂರಿನಲ್ಲಿ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಹೇಮಂತ್‌ನ ಪರಿಚಯವಾಗುತ್ತದೆ. ಇಬ್ಬರು ಪರಸ್ಪರ ಪ್ರೀತಿಸಿ ಕಳೆದ ಫೆಬ್ರವರಿಯಲ್ಲಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಬಳಿಕ ಸ್ನೇಹಿತನ ರೂಮ್‌ನಲ್ಲಿ ಇಬ್ಬರು ಸಂಸಾರ ಮಾಡಿದ್ದರಂತೆ. ಹೊಸ ಮನೆ ಮಾಡುವುದಾಗಿ ಹಣ ಮತ್ತು ಚಿನ್ನ ಪಡೆದಿದ್ದ ಹೇಮಂತ್​, ತನ್ನನ್ನು ಗರ್ಭಿಣಿ ಮಾಡಿ ಈಗ ‘ತನ್ನ ಚಾರಿತ್ರ್ಯ ಸರಿ ಇಲ್ಲ’ ಎಂದು ದೂರ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಅಲ್ಲದೆ ಹೇಮಂತ್ ಕುಮಾರ್ ಕುಟುಂಬಸ್ಥರಿಂದಲೂ ಹಣಕ್ಕಾಗಿ ಕಿರುಕುಳವಿದೆ ಎಂದು ಆರೋಪಿಸುತ್ತಿರುವ ಸಂತ್ರಸ್ತೆ, ಮದುವೆಯಾಗಿದ್ದೇನೆ ಗಂಡನ ಜೊತೆ ಬಾಳಲು ಅವಕಾಶ ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾಳೆ.

ಪಶ್ಚಿಮ ವಿಭಾಗ ಮಹಿಳಾ ಪೊಲೀಸ್ ಠಾಣೆಗೆ ಸಂತ್ರಸೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Leave a Comment

Your email address will not be published. Required fields are marked *