ಮಂಜುನಾಥ ರಾವ್​ ನಿವಾಸಕ್ಕೆ ಅಸ್ಸೋಂ ಸಚಿವ ಭೇಟಿ, ₹5 ಲಕ್ಷ ಪರಿಹಾರ


ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಮಂಜುನಾಥ ರಾವ್ ನಿವಾಸಕ್ಕೆ ಭಾನುವಾರ ಅಸ್ಸೋಂನ ಸಚಿವ ಬಿಮಲ್ ಬೋರಾಹ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬೆಂಗಳೂರಿನಿಂದ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಬಿಮಲ್ ಬೋರಾಹ್, ವಿಜಯನಗರದ ಮಂಜುನಾಥ ರಾವ್ ಅವರ ಮನೆಗೆ ಭೇಟಿ ನೀಡಿ, ಮಂಜುನಾಥ ರಾವ್ ಆವರ ಫೋಟೋಗೆ ಪುಷ್ಪ ನಮನ ಸಲ್ಲಿಸಿದರು. ನಂತರ ರಾವ್ ಅವರ ತಾಯಿ ಸುಮತಿ, ಪತ್ನಿ ಪಲ್ಲವಿ ಹಾಗೂ ಮಗ ಅಭಿರಾಮ್ ಅವರಿಗೆ ಸಾಂತ್ವನ ಹೇಳಿ, 5 ಲಕ್ಷ ಮೊತ್ತದ ಚೆಕ್ ಪರಿಹಾರವಾಗಿ ನೀಡಿದರು.

ನಂತರ ಮಾತನಾಡಿದ ಅವರು, “ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಜನರನ್ನು ಕಳೆದುಕೊಂಡೆವು. ಮೃತರ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಲು ಅಸ್ಸೋಂನ ಸಿಎಂ ಹಿಮಂತ ಬಿಸ್ವಾ ಶರ್ಮಾ, ಮೃತರ ಕುಟುಂಬಸ್ಥರನ್ನು ಭೇಟಿ ಮಾಡುವಂತೆ ನಮ್ಮ ರಾಜ್ಯದ ಸಚಿವರಿಗೆ ಸೂಚಿಸಿದ್ದಾರೆ. ನನಗೆ ಕರ್ನಾಟಕದ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಲು ತಿಳಿಸಿದ್ದರು. ಹೀಗಾಗಿ ನಾನು ಶಿವಮೊಗ್ಗದ ಮಂಜುನಾಥ ರಾವ್ ಅವರ ಮನೆಗೆ ಬಂದು ಅವರ ಕುಟುಂಬಸ್ಥರನ್ನು ಭೇಟಿ ಮಾಡಿ, ಅವರೊಂದಿಗೆ ಮಾತನಾಡಿ ಧೈರ್ಯ ತುಂಬಿದ್ದೇನೆ” ಎಂದು ಹೇಳಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಶಾಸಕ ಡಿ.ಎಸ್. ಅರುಣ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಮತ್ತಿತರರು ಇದ್ದರು.


Leave a Comment

Your email address will not be published. Required fields are marked *