ಕಾರುಗಳು ‘ಆಪರೇಷನ್‌ ಸಿಂಧೂರ’ಮಯ


ಬೆಳಗಾವಿ: ದೇಶಾದ್ಯಂತ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಹಲವೆಡೆ ತಮ್ಮ ಮಕ್ಕಳಿಗೆ ಸಿಂಧೂರ ಅಥವಾ ಸಿಂಧೂರಿ ಅಂತಾ ಹೆಸರಿಟ್ಟು ಸಂಭ್ರಮಿಸುತ್ತಿದ್ದರೆ, ಮತ್ತೊಂದಿಷ್ಟು ಕಡೆ ಭಾರತೀಯ ಸೈನಿಕರ ಪರಾಕ್ರಮ ಮೆಚ್ಚಿ ತಿರಂಗಾ ರ‍್ಯಾಲಿ ಸೇರಿ ದೇಶಾಭಿಮಾನ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಬೆಳಗಾವಿಯಲ್ಲಿ ಇಬ್ಬರು ದೇಶಾಭಿಮಾನಿಗಳು ತಮ್ಮ ಕಾರುಗಳ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಬಿಂಬಿಸುವ ಚಿತ್ರಗಳನ್ನು ಅಂಟಿಸಿ‌ದ್ದಾರೆ.

ಬೆಳಗಾವಿಯ ಹೈಟೆಕ್ ಮೋಟರ್ಸ್ ಆ್ಯಂಡ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್​ನ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಂದ್ರ ದೇಸಾಯಿ ಅವರು ತಮ್ಮ ‘ಹೊಂಡಾ ಎಕ್ಸಟರ್’ ಕಾರು ಮತ್ತು ಬೆಳಗಾವಿಯ ಸಮಾಜಸೇವಕ ಶಿವಾ ಚೌಗುಲೆ ತಮ್ಮ ಥಾರ್ ಕಾರಿನ ಮೇಲೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಸ್ಟಿಕ್ಕರ್ ಅಂಟಿಸುವ ಮೂಲಕ ತಮ್ಮ ದೇಶಾಭಿಮಾನ ಮೆರೆದಿದ್ದಾರೆ.

ರಾಜೇಂದ್ರ ದೇಸಾಯಿ ಅವರು ತಮ್ಮ ಕಾರಿನ ಮೇಲೆ ಬ್ರಹ್ಮೋಸ್ ಮಿಸೈಲ್ ಮಾದರಿ ಅಳವಡಿಸಿದ್ದು, ಕಾರಿನ ಒಂದು ಬಾಗಿಲಿಗೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಮತ್ತೊಂದು ಬಾಗಿಲಿಗೆ ಬೆಳಗಾವಿ ಜಿಲ್ಲೆಯ ಹೆಮ್ಮೆಯ ಸೊಸೆ ಕರ್ನಲ್ ಸೋಫಿಯಾ ಖುರೇಷಿ ಅವರ ಭಾವಚಿತ್ರಗಳನ್ನು ಅಳವಡಿಸಿದ್ದಾರೆ. ಅಲ್ಲದೇ ರಫೇಲ್ ಯುದ್ಧ ವಿಮಾನ, ಐರನ್ ಏರ್ ಡೋಮ್​, ಯುದ್ಧ ಟ್ಯಾಂಕರ್ ಚಿತ್ರಗಳನ್ನೂ ಅಂಟಿಸಿದ್ದಾರೆ. ಅದೇ ರೀತಿ ಶಿವಾ ಚೌಗುಲಾ ಕೂಡ ತಮ್ಮ ಥಾರ್ ಕಾರಿನ ಮೇಲೆ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಭಾವಚಿತ್ರಗಳು ಮತ್ತು ಆಪರೇಷನ್ ಸಿಂಧೂರ ಬರಹದ ಸ್ಟಿಕ್ಕರ್ ಅಳವಡಿಸಿದ್ದು ಆಕರ್ಷಕವಾಗಿದೆ.

ಈ ಎರಡೂ ಕಾರುಗಳು ಎಲ್ಲರ ಗಮನ ಸೆಳೆಯುತ್ತಿವೆ. ಜನರು ಕಾರಿನ ಜೊತೆಗೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ರಾಜೇಂದ್ರ ದೇಸಾಯಿ ಮತ್ತು ಶಿವಾ ಚೌಗುಲಾ ಅವರ ದೇಶಾಭಿಮಾನಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.


Leave a Comment

Your email address will not be published. Required fields are marked *