ಹುಬ್ಬಳ್ಳಿ: ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಕಟ್ಟಡ ಕಾಮಗಾರಿಗಳ ಸ್ಥಳಗಳಲ್ಲಿ ಸುರಕ್ಷತೆ, ಗುಣಮಟ್ಟ ಮತ್ತು ದಕ್ಷತೆ ಸುಧಾರಿಸಲು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುತ್ತಿದೆ. ಈ ಮೂಲಕ ಸುರಕ್ಷಿತ ಮತ್ತು ದಕ್ಷ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನೈರುತ್ಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ.
ನೈರುತ್ಯ ರೈಲ್ವೆ ವ್ಯಾಪ್ತಿಯ ಪ್ರಮುಖವಾದ ಎರಡು ಕಾಮಗಾರಿ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆಲಮಟ್ಟಿ ಸೇತುವೆ ಸಂಖ್ಯೆ 63ಡಿ ನಲ್ಲಿ ಮೂರು ಕ್ಯಾಮರಾಗಳು ಮತ್ತು ಭೀಮಾ ಸೇತುವೆಯ ಸಮೀಪದಲ್ಲಿ ಎರಡು ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ.
ಕಾಮಗಾರಿ ಪ್ರದೇಶಗಳ ಸಮಗ್ರ ಕವರೇಜ್: ಈ ಕ್ಯಾಮರಾಗಳು ಕಾಮಗಾರಿ ಪ್ರದೇಶಗಳ ಸಮಗ್ರ ಕವರೇಜ್ ಅನ್ನು ಒದಗಿಸುತ್ತವೆ. ಇದರಿಂದ ಕಾಮಗಾರಿಯ ಪ್ರಗತಿ, ಸಿಬ್ಬಂದಿ ಮತ್ತು ಯಂತ್ರೋಪಕರಣಗಳ ನಿಯೋಜನೆ, ಮತ್ತು ಸುರಕ್ಷಿತ ಕೆಲಸದ ಪದ್ಧತಿಗಳ ಅನುಸರಣೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಬಹುದು. ಕ್ಯಾಮರಾಗಳು ಉನ್ನತ ಗುಣಮಟ್ಟದ ನಿಯಂತ್ರಣವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.





