ವೃದ್ಧ ದಂಪತಿಗೆ ಮೂರು ತಿಂಗಳು ಡಿಜಿಟಲ್ ಅರೆಸ್ಟ್


ಬೆಂಗಳೂರು : ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾರಾಯಣ್ ಸಿಂಗ್ ಚೌಧರಿ ಹಾಗೂ ಈಶ್ವರ್ ಸಿಂಗ್ ಬಂಧಿತ ಆರೋಪಿಗಳು. ಮಂಜುನಾಥ್ ಎಂಬುವರು ನೀಡಿದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಇಂಜಿನಿಯರ್ ಆಗಿದ್ದ ಮಂಜುನಾಥ್ 31 ವರ್ಷಗಳ ಕಾಲ ನೈಜೀರಿಯಾದಲ್ಲಿ ಕೆಲಸ ನಿರ್ವಹಿಸಿ, ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬ್ಯಾಂಕ್‌ನ ಪ್ರತಿನಿಧಿಗಳ ಸೋಗಿನಲ್ಲಿ ಮಾರ್ಚ್ ತಿಂಗಳಿನಲ್ಲಿ ಮಂಜುನಾಥ್ ಅವರಿಗೆ ಕರೆ ಮಾಡಿದ್ದ ಆರೋಪಿಗಳು, “ಕ್ರೆಡಿಟ್ ಕಾರ್ಡ್ ಲಿಮಿಟ್ಸ್ ಓವರ್ ಡ್ಯೂ ಆಗಿದೆ” ಎಂದು ವಿವರಗಳನ್ನು ಪಡೆದುಕೊಂಡಿದ್ದರು. ಬಳಿಕ ನಿಮ್ಮ ಖಾತೆಯ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ, ಆದ್ದರಿಂದ ಇಡಿ, ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದಿದ್ದರು. ನಂತರ ನಕಲಿ ವಾರೆಂಟ್‌ನ ಫೋಟೋ ಕಳಿಸಿ “ನಿಮ್ಮನ್ನ ಬಂಧಿಸುತ್ತಿದ್ದು, ತಿಹಾರ್ ಜೈಲಿನಲ್ಲಿರಿಸಲಿದ್ದೇವೆ” ಎಂದು ಬೆದರಿಸಿದ್ದರು. ಹೀಗೆ.. ಮೂರು ತಿಂಗಳ ಕಾಲ ಬೆದರಿಸುತ್ತ ವಿವಿಧ ಹಂತಗಳಲ್ಲಿ 4.79 ಕೋಟಿ ರೂಪಾಯಿ ಸುಲಿಗೆಗೈದಿದ್ದ ಆರೋಪಿಗಳು, ಆಸ್ತಿ ಪತ್ರಗಳ ಕಾಪಿಗಳನ್ನು ಸಹ ಪಡೆದುಕೊಂಡಿದ್ದರು. ವಂಚಕರ ಕಿರುಕುಳ‌ ಅತಿಯಾದಾಗ ಅದನ್ನು ತಾಳಲಾರದ ದಂಪತಿ ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.


Leave a Comment

Your email address will not be published. Required fields are marked *