ರಾಜ್ಯದಲ್ಲಿ ಇಂದಿನಿಂದ ಬೈಕ್ ಟ್ಯಾಕ್ಸಿ ಬಂದ್


ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ನಿಷೇಧ ಸೋಮವಾರದಿಂದ ಅಧಿಕೃತವಾಗಿ ಜಾರಿಯಾಗಿದೆ. ಬೈಕ್ ಟ್ಯಾಕ್ಸಿ ಸೇವೆ ನೀಡಲು ಗೈಡ್ ಲೈನ್ಸ್ ಜಾರಿಯಾಗುವವರೆಗೂ ಸೇವೆಗಳನ್ನ ಸ್ಥಗಿತಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನ ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಬೈಕ್ ಟ್ಯಾಕ್ಸಿ ಕಂಪನಿಗಳು ಕೋರಿದ್ದ ಆರು ವಾರಗಳ ಕಾಲಾವಕಾಶ ಸಹ ಭಾನುವಾರ (ಜೂನ್​ 15)ದಂದು ಮುಕ್ತಾಯಗೊಂಡಿದ್ದು, ಮಧ್ಯಂತರ ಅನುಮತಿಯನ್ನೂ ನಿರಾಕರಿಸಲಾಗಿದೆ. ಆದ್ದರಿಂದ ರ‍್ಯಾಪಿಡೋ, ಊಬರ್ ಮತ್ತಿತರ ಕಂಪನಿಗಳು ತಮ್ಮ ಆ್ಯಪ್‌ನಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಆಯ್ಕೆಯನ್ನ ತೆಗೆದು ಹಾಕಿವೆ.

ಬೈಕ್ ಟ್ಯಾಕ್ಸಿ ಸೇವೆಗಳ ಸ್ಥಗಿತದ ಕುರಿತು ಆ್ಯಪ್‌ನ ಮೂಲಕ ತನ್ನ ಬಳಕೆದಾರರಿಗೆ ಮಾಹಿತಿ ನೀಡಿರುವ ರ‍್ಯಾಪಿಡೋ ಕಂಪನಿ, “ಹೈಕೋರ್ಟ್‌ನ ಇತ್ತೀಚಿನ ಆದೇಶದ ಅನುಸಾರವಾಗಿ ಜೂನ್ 16, 2025ರಿಂದ ಕರ್ನಾಟಕದಲ್ಲಿ ನಮ್ಮ ಬೈಕ್ ಟ್ಯಾಕ್ಸಿ ಸೇವೆಗಳನ್ನ ಸ್ಥಗಿತಗೊಳಿಸಲಾಗಿದೆ. ಬೈಕ್ ಟ್ಯಾಕ್ಸಿಗಳು ದೈನಂದಿನ ಪ್ರಯಾಣಿಕರಿಗೆ ತರುವ ಮೌಲ್ಯವನ್ನ ನಾವು ನಂಬುತ್ತೇವೆ. ಆದರೆ, ನಾವು ಕಾನೂನನ್ನು ಗೌರವಿಸುತ್ತೇವೆ ಮತ್ತು ನಿರ್ದೇಶನವನ್ನ ಸಂಪೂರ್ಣವಾಗಿ ಪಾಲಿಸುತ್ತೇವೆ. ಬೈಕ್ ಟ್ಯಾಕ್ಸಿಗಳನ್ನ ಶೀಘ್ರದಲ್ಲೇ ಪುನಃ ರಸ್ತೆಗಿಳಿಸಲು ನಾವು ಸರ್ಕಾರದೊಂದಿಗೆ ಮುಂದಿನ ಹಾದಿಯಲ್ಲಿ ಸಾಗುತ್ತೇವೆ” ಎಂದು ತಿಳಿಸಿದೆ.

ಬೈಕ್ ಟ್ಯಾಕ್ಸಿ ಸೇವೆಗಳ ನಿಷೇಧಕ್ಕೆ ಕಾರಣವೇನು..!: ಬೈಕ್ ಟ್ಯಾಕ್ಸಿ ಸೇವೆಗಳ ನಿಯಂತ್ರಣಕ್ಕೆ ಸರ್ಕಾರ ಇದುವರೆಗೂ ಯಾವುದೇ ಗೈಡ್ ಲೈನ್ಸ್ ಹೊಂದಿಲ್ಲ. ಪ್ರಯಾಣಿಸುವವರ ಸುರಕ್ಷತೆ, ಹೆಲ್ಮೆಟ್ ಬಳಕೆ ಹಾಗೂ ಅವುಗಳ ಗುಣಮಟ್ಟ, ಚಾಲಕನ ಪರವಾನಗಿ, ಅಪಘಾತ, ಇನ್ಶುರೆನ್ಸ್ ಕುರಿತು ಬೈಕ್ ಟ್ಯಾಕ್ಸಿ ವಿರುದ್ಧ ವಾದಗಳಿವೆ. ಇನ್ನು ಬೈಕ್ ಟ್ಯಾಕ್ಸಿ ಸೇವೆಗಳಿಗೆ ಆರಂಭದಿಂದಲೂ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವ ಆಟೋ, ಟ್ಯಾಕ್ಸಿ ಚಾಲಕರು,”ಕೋವಿಡ್ ಬಳಿಕ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ಅದರ ನಡುವೆ ಬೈಕ್ ಟ್ಯಾಕ್ಸಿ ಸೇವೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿರುವ ರಾಜ್ಯ ಸರ್ಕಾರದ ಶಕ್ತಿ ಯೋಜನೆಗಳಿಂದ ತಾವು ಆರ್ಥಿಕ ಸಂಕಷ್ಟಕ್ಕೀಡಾಗುತ್ತಿದ್ದೇವೆ” ಎನ್ನುತ್ತಿದ್ದಾರೆ. ಇದರ ನಡುವೆ ಸುರಕ್ಷತಾ ಕಾಳಜಿ ಮತ್ತು ಪರವಾನಗಿಗಳಿಲ್ಲದೇ ಕಾರ್ಯನಿರ್ವಹಿಸುವುದು ಕಾನೂನುಬಾಹಿರ ಎಂದು ಬೈಕ್ ಟ್ಯಾಕ್ಸಿ ಸೇವೆಗಳನ್ನ ಸ್ಥಗಿತಗೊಳಿಸಲಾಗಿದೆ. ಆದರೆ ಪರವಾನಗಿ, ತರಬೇತಿ ಮತ್ತು ವಿಮೆಗಾಗಿ ಸ್ಪಷ್ಟ ನಿಯಮಗಳನ್ನ ರೂಪಿಸುವ ಬದಲು ಬ್ಯಾನ್ ಮಾಡುವ ನಿರ್ಧಾರ ಸೂಕ್ತವಲ್ಲ. ಇದು ಸಾವಿರಾರು ಚಾಲಕರನ್ನ ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ ಎಂಬುದು ಚಾಲಕರ ವಾದ.


Leave a Comment

Your email address will not be published. Required fields are marked *