ನಾನು ಯಾರಿಂದಲೂ ಕನ್ನಡಾಭಿಮಾನವನ್ನು ಕಲಿಯುವ ಅಗತ್ಯವಿಲ್ಲ ಎಂದ ಸಚಿವ ಎಂ.ಬಿ.ಪಾಟೀಲ್


ಬೆಂಗಳೂರು: ಕೆಎಸ್​ಡಿಎಲ್ ಸಂಸ್ಥೆಯ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕನ್ನಡದ ಅಸ್ಮಿತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸಂಸ್ಥೆಯ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವ್ಯವಹಾರ ನಡೆಸಿ ಜೈಲಿಗೆ ಹೋಗಿದ್ದರು. ಆಗ ತೆಪ್ಪಗಿದ್ದ ವಿಜಯೇಂದ್ರ ಅವರಿಗೂ ಮಾಡಾಳ್​ಗೂ ವ್ಯವಹಾರ ಇತ್ತೇನೋ. ಆಗ ಏಕೆ ಇವರಿಗೆ ಕನ್ನಡದ ಅಸ್ಮಿತೆ ನೆನಪಾಗಲಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ.ಪಾಟೀಲ್ ಕಿಡಿ ಕಾರಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಕೆಎಸ್​ಡಿಎಲ್ ಸಾರ್ವಕಾಲಿಕ ಉತ್ಪಾದನೆ, ವಹಿವಾಟು ಮತ್ತು ಲಾಭ ಮಾಡಿದೆ. ಇದನ್ನು ನಾನು ನನ್ನ ಸ್ವಂತ ವ್ಯಾಪಾರಕ್ಕಿಂತ ಹೆಚ್ಚು ಆದ್ಯತೆ ಕೊಟ್ಟು, ದಕ್ಷತೆ ಹೆಚ್ಚಿಸಿದ್ದೇನೆ. ಸಂಸ್ಥೆ ಸೊರಗಿದ್ದಾಗ ಏನೂ ಮಾತನಾಡದವರ ಕೆಂಗಣ್ಣು ಈಗ ಅದರ ಮೇಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಮನ್ನಾ ಭಾಟಿಯಾ ಆಯ್ಕೆಯ ಹಿಂದೆ ವಾಣಿಜ್ಯಿಕ ಉದ್ದೇಶ- ಪಾಟೀಲ್: ಹಿಂದಿ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯಾಗಿ ಮಾಡಿಕೊಂಡಿರುವುದರ ಹಿಂದೆ ವಾಣಿಜ್ಯಿಕ ಉದ್ದೇಶವಿದೆ. ನಾನು ಇದನ್ನು ಸ್ಪಷ್ಟಪಡಿಸಿದ ಮೇಲೆ ಕೆಲವು ಕನ್ನಡಪರ ಸಂಘಟನೆಗಳ ನಾಯಕರು, ಈ ವಿಚಾರ ತಮಗೆ ಗೊತ್ತಿರಲಿಲ್ಲ, ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ನನಗೆ ಹೇಳಿದ್ದಾರೆ. ನಾನು ಯಾರಿಂದಲೂ ಕನ್ನಡಾಭಿಮಾನವನ್ನು ಕಲಿಯುವ ಅಗತ್ಯವಿಲ್ಲ ಎಂದರು

.ಕಳೆದ ಎರಡು ವರ್ಷಗಳಲ್ಲಿ 23 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ಡಿಶ್ ವಾಶರ್ ಮತ್ತು ಸುಗಂಧ ದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ನಾವು ವ್ಯಾಪಾರವನ್ನು ವ್ಯಾಪಾರವಾಗಿಯೇ ನೋಡಬೇಕು ಎಂದು ಅವರು ತಿಳಿಸಿದರು.


Leave a Comment

Your email address will not be published. Required fields are marked *